×
Ad

ನವಿ ಮುಂಬೈ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Update: 2025-10-08 20:52 IST

Photo Credit : PTI

ಮುಂಬೈ,ಅ.8: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅತ್ಯಾಧುನಿಕ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ನೂತನ ವಿಮಾನ ನಿಲ್ದಾಣವು ಮುಂಬೈ, ಪುಣೆ ಮತ್ತು ಕೊಂಕಣ ಪ್ರದೇಶದಲ್ಲಿ ವ್ಯಾಪಾರ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಉದ್ಘಾಟನೆಗೆ ಮುನ್ನ ಮೋದಿ ವಿಮಾನ ನಿಲ್ದಾಣದಲ್ಲಿ ಒಂದು ಸುತ್ತು ಓಡಾಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದ ಉದ್ಘಾಟನೆಯು ಮುಂಬೈನ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸಿದೆ ಎಂದು ಹೇಳಿದ ಮೋದಿ,ವಿಕಸಿತ ಭಾರತ ದೃಷ್ಟಿಕೋನವು ವೇಗ ಮತ್ತು ಪ್ರಗತಿಗೆ ಒತ್ತು ನೀಡುತ್ತದೆ ಎಂದರು.

2014ರವರೆಗೆ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 160ಕ್ಕೇರಿದೆ. ಉಡಾನ್ ಯೋಜನೆಯಿಂದಾಗಿ ಕಳೆದೊಂದು ದಶಕದಲ್ಲಿ ಲಕ್ಷಾಂತರ ಜನರು ಮೊದಲ ಬಾರಿಗೆ ವಿಮಾನ ಪ್ರಯಾಣವನ್ನು ಮಾಡುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು.

‘ಕಾಯುವಿಕೆ ಕೊನೆಗೂ ಮುಗಿದಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಫಡ್ನವೀಸ್, ನೂತನ ನಿಲ್ದಾಣವು ವಿಮಾನ ಪ್ರಯಾಣವನ್ನು ಮರುವ್ಯಾಖ್ಯಾನಿಸಲು, ಮಹಾರಾಷ್ಟ್ರದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಭಾರತವನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಜಗತ್ತಿನೊಂದಿಗೆ ಸಂಪರ್ಕಿಸಲು ಸಜ್ಜಾಗಿದೆ ಎಂದಿದ್ದಾರೆ.

19,650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವು ಆರಂಭದಲ್ಲಿ ವಾರ್ಷಿಕ ಎರಡು ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆಯಿದೆ. ಪ್ರಯಾಣವನ್ನು ಸುಗಮಗೊಳಿಸುವ ಜೊತೆಗೆ ಪುಣೆಯಲ್ಲಿನ ಕೈಗಾರಿಕೆಗಳಿಗೆ ಜಾಗತಿಕ ಮಾರುಕಟ್ಟೆಗಳೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ.

ನವಿ ಮುಂಬೈ ವಿಮಾನ ನಿಲ್ದಾಣವು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿ.(ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿ.ನ ಅಂಗಸಂಸ್ಥೆ) ಮತ್ತು ಮಹಾರಾಷ್ಟ್ರ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ(ಸಿಡ್ಕೋ) ನಡುವೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಿರ್ಮಾಣಗೊಂಡಿದೆ.

ದೇಶದ ಅತಿ ದೊಡ್ಡ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿರುವ ಇದು 3,700 ಮೀ.ಉದ್ದದ ರನ್‌ ವೇ ಹೊಂದಿದ್ದು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಕಾರ್ಯಾಚರಿಸಲಿದೆ.

ಮುಂಬೈ ಮಹಾನಗರ ಪ್ರದೇಶದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಇದು ದಟ್ಟಣೆಯನ್ನು ಕಡಿಮೆಗೊಳಿಸಲಿದೆ. ಇದರೊಂದಿಗೆ ಲಂಡನ್, ಟೋಕಿಯೊ ಮತ್ತು ನ್ಯೂಯಾರ್ಕ್‌ನಂತಹ ಬಹು ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳ ಗುಂಪಿಗೆ ಮುಂಬೈ ಸೇರಿದೆ.

ಏರ್ ಇಂಡಿಯಾ ಸೇರಿದಂತೆ ವಿವಿಧ ವಿಮಾನ ಯಾನ ಸಂಸ್ಥೆಗಳು ನೂತನ ನಿಲ್ದಾಣದಿಂದ ಕಾರ್ಯಾಚರಿಸುವ ತಮ್ಮ ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದ್ದು,ಆರಂಭಿಕ ಯಾನಗಳು ದೇಶದ ವಿವಿಧ ನಗರಗಳನ್ನು ಸಂಪರ್ಕಿಸಲಿವೆ. ಯೋಜನೆಯು ಪೂರ್ಣಗೊಂಡ ಬಳಿಕ ವಿಮಾನ ನಿಲ್ದಾಣವು ವಾರ್ಷಿಕ ಒಂಭತ್ತು ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ ಮತ್ತು 32 ಲಕ್ಷ ಟನ್‌ ಗೂ ಅಧಿಕ ಸರಕು ಸಾಗಣೆಯನ್ನು ನಿರ್ವಹಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News