×
Ad

ದೇಶದ ಹೆಸರು ಬದಲಾವಣೆ ಬೆಂಕಿಗೆ ತುಪ್ಪ ಸುರಿದ ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್’

Update: 2023-09-06 23:02 IST

Photo: twitter \ @sambitswaraj

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಿ20 ನಾಯಕರಿಗೆ ಭೋಜನಕೂಟಕ್ಕೆ ಆಹ್ವಾನದಲ್ಲಿ ಸಾಂಪ್ರದಾಯಿಕ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ದ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂಬ ಪದದ ಬಳಕೆಯು ಈಗಾಗಲೇ ವಿವಾದ ಮತ್ತು ಊಹಾಪೋಹಗಳನ್ನು ಸೃಷ್ಟಿಸಿದೆ. ಈ ನಡುವೆ ನರೇಂದ್ರ ಮೋದಿಯವರನ್ನು ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ’ ಎಂದು ಉಲ್ಲೇಖಿಸಿರುವ ಇನ್ನೊಂದು ದಾಖಲೆ ಮಂಗಳವಾರ ಬೆಳಕಿಗೆ ಬಂದಿದೆ. ತನ್ಮೂಲಕ ದೇಶದ ಹೆಸರು ಬದಲಾವಣೆ ವಿವಾದದ ಬೆಂಕಿಗೆ ತುಪ್ಪ ಎರಚಿದಂತಾಗಿದೆ.

20ನೇ ಆಸಿಯಾನ್-ಇಂಡಿಯಾ ಶೃಂಗಸಭೆ ಮತ್ತು 18ನೇ ಪೂರ್ವ ಏಶ್ಯಾ ಶೃಂಗಸಭೆಗಾಗಿ ಬುಧವಾರ ಮತ್ತು ಗುರುವಾರ ಇಂಡೋನೇಶ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕುರಿತ ಟಿಪ್ಪಣಿಯಲ್ಲಿ ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ’ ಪದವನ್ನು ಬಳಸಲಾಗಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ‘x(ಹಿಂದಿನ ಟ್ವಿಟರ್)’ನಲ್ಲಿ ಪೋಸ್ಟ್ ಮಾಡಿರುವ ಟಿಪ್ಪಣಿಯ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್, ‘ಆಸಿಯಾನ್-ಇಂಡಿಯಾ ಶೃಂಗಸಭೆ ’ ಮತ್ತು ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ’ಪದಗಳನ್ನು ಒಂದೇ ದಾಖಲೆಯಲ್ಲಿ ಬಳಸಿರುವುದನ್ನು ಬೆಟ್ಟು ಮಾಡಿದೆ.

‘‘ಮೋದಿ ಸರಕಾರ ಎಷ್ಟು ಗೊಂದಲದಲ್ಲಿದೆ ನೋಡಿ! 20ನೇ ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್. ಪ್ರತಿಪಕ್ಷಗಳು ಒಂದಾಗಿ ತಮ್ಮ ಮೈತ್ರಿಕೂಟವನ್ನು ‘ಇಂಡಿಯಾ’ಎಂದು ಹೆಸರಿಸಿದ್ದಕ್ಕಾಗಿಯೇ ಈ ಎಲ್ಲ ನಾಟಕ ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ ‘ x’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆ.9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗಸಭೆಗಾಗಿ ಭಾರತೀಯ ಅಧಿಕಾರಿಗಳ ಗುರುತಿನ ಚೀಟಿಗಳಲ್ಲಿ ಸಹ ಈಗ ‘ಭಾರತ್-ಅಧಿಕಾರಿ ’ಎಂದು ಉಲ್ಲೇಖಿಸಲಾಗಿದೆ.

‘ಪ್ರೆಸಿಡೆಂಟ್ ಆಫ್ ಭಾರತ್’ ಹೆಸರಿನಲ್ಲಿ ಜಿ20 ನಾಯಕರಿಗೆ ರಾಷ್ಟ್ರಪತಿಗಳ ಆಹ್ವಾನವು ದೇಶದ ಹೆಸರು ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಗಿದ್ದು, ಸೆ.18ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೆಸರು ಬದಲಾವಣೆಯ ಸಾಧ್ಯತೆಯನ್ನು ಬೆಟ್ಟು ಮಾಡಿದೆ. ವಿಶೇಷ ಅಧಿವೇಶನಕ್ಕಾಗಿ ಯಾವುದೇ ಅಜೆಂಡಾವನ್ನು ಸರಕಾರವು ಪ್ರಕಟಿಸದಿರುವುದು ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News