×
Ad

ಉತ್ತರ ಪ್ರದೇಶ| ಜೈಲಿನಲ್ಲಿ ಕೈದಿ ಸಾವು: ಉದ್ರಿಕ್ತರಿಂದ ಪೊಲೀಸರ ಮೇಲೆ ಕಲ್ಲುತೂರಾಟ

Update: 2024-06-22 12:55 IST
Photo: X/@PTI_News

ಫಿರೋಝಾಬಾದ್, ಉತ್ತರ ಪ್ರದೇಶ: ಇಲ್ಲಿನ ಕಾರಾಗೃಹದಲ್ಲಿ ಬಂಧಿತನಾಗಿದ್ದ 25 ವರ್ಷ ವಯಸ್ಸಿನ ಕೈದಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬೆನ್ನಲ್ಲೇ ಉದ್ರಿಕ್ತ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮೋಟರ್ ಸೈಕಲ್ ಕಳ್ಳತನ ಆರೋಪದಲ್ಲಿ ಆಕಾಶ್ ಎಂಬಾತನನ್ನು ಬಂಧಿಸಿ ಆತನಿಂದ ಬೈಕ್ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಎಸ್ಪಿ ಸೌರಭ್ ದೀಕ್ಷಿತ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ಬೈಕ್ ಕದ್ದ ಆರೋಪದಲ್ಲಿ ಆಕಾಶ್‍ನನ್ನು ಬಂಧಿಸಲಾಗಿತ್ತು ಎಂದು ಫಿರೋಝಾಬಾದ್ ಎಸ್‍ಎಚ್‍ಓ ಯೋಗೀಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.

ಆಕಾಶ್‍ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು ಹಾಗೂ ಫಿರೋಝಾಬಾದ್ ಜೈಲಿನಲ್ಲಿ ಇಡಲಾಗಿತ್ತು. ಗುರುವಾರ ರಾತ್ರಿ ಆತನ ದೇಹಸ್ಥಿತಿ ವಿಷಮಿಸಿ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆ ವೇಳೆ ಶುಕ್ರವಾರ ಮೃತಪಟ್ಟಿದ್ದಾನೆ. ಶುಕ್ರವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಆ್ಯಂಬುಲೆನ್ಸ್ ವಾಹನ ತಡೆದು ಪ್ರತಿಭಟನೆ ನಡೆಸಿದರು ಎಂದು ಎಸ್ಪಿ ವಿವರಿಸಿದ್ದಾರೆ.

ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News