×
Ad

10 ಕೋಟಿ ರೂ.ಗಳ ಡ್ರಗ್ ಸಾಮ್ರಾಜ್ಯ ನಡೆಸಲು ʼಪಬ್‌ಜಿʼ ಬಳಕೆ, ಡೆಲಿವರಿ ಮಾಡುವವರಿಗೆ 50,000 ರೂ.!

Update: 2025-04-20 16:45 IST

PC : indiatoday.in

ಹೊಸದಿಲ್ಲಿ: ಗಡಿಯಾಚೆಯಿಂದ ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿರುವ ದಿಲ್ಲಿ ಪೋಲಿಸ್ ಕ್ರೈಂ ಬ್ರ್ಯಾಂಚ್‌ನ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ(ಎಎನ್‌ಟಿಎಫ್)ಯು ಅಫ್ಘಾನಿಸ್ತಾನ್, ಪಾಕಿಸ್ತಾನ, ಪಂಜಾಬ್, ಜಮ್ಮುಕಾಶ್ಮೀರ ಮತ್ತು ದಿಲ್ಲಿ-ಎನ್‌ಸಿಆರ ಪ್ರದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದ ವ್ಯಾಪಕ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ.

‘ಆಪರೇಷನ್ ಕ್ಲೀನ್ ಸ್ವೀಪ್’ ಹೆಸರಿನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಕಿಂಗ್‌ಪಿನ್ ಎನ್ನಲಾಗಿರುವ ಓರ್ವ ಮಹಿಳೆ ಸೇರಿದಂತೆ 10 ಜನರನ್ನು ಈವರೆಗೆ ಬಂಧಿಸಲಾಗಿದೆ. ಈ ಪೈಕಿ ಓರ್ವ ಆರೋಪಿ ಹೆರಾಯಿನ್ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಲು ಪಬ್‌ಜಿ ಆನ್‌ಲೈನ್ ಗೇಮ್‌ ಅನ್ನು ಬಳಸುತ್ತಿದ್ದ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದಾನೆ.

ಕಾರ್ಯಾಚರಣೆಯಲ್ಲಿ ಒಟ್ಟು 1,667 ಗ್ರಾಂ ಅತ್ಯುತ್ತಮ ಗುಣಮಟ್ಟದ ಅಫಘಾನ್ ಮೂಲದ ಹೆರಾಯಿನ್ ಮತ್ತು 130 ಗ್ರಾಂ ಶಂಕಿತ ರಾಸಾಯನಿಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮಹತ್ವದ ಡಿಜಿಟಲ್ ಪುರಾವೆಗಳು ಮತ್ತು ಅಕ್ರಮ ನಗದು ಆದಾಯವೂ ಪೋಲಿಸರ ಕೈಸೇರಿದೆ. ಹೆಚ್ಚಿನ ಆರ್ಥಿಕ ತನಿಖೆಗಾಗಿ 10 ಕೋ.ರೂ.ಗೂ ಅಧಿಕ ಮೌಲ್ಯದ ಐದು ಆಸ್ತಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಪೋಲಿಸರು ದಿಲ್ಲಿಯ ಲಾಜಪತ್ ನಗರ ಪ್ರದೇಶದಲ್ಲಿ ಜಮ್ಮುಕಾಶ್ಮೀರದ ಶ್ರೀನಗರ ನಿವಾಸಿ ಫಾಹೀಮ್ ಫಾರೂಕ್(37) ಎಂಬಾತನನ್ನು ಬಂಧಿಸಿದ್ದು,ಆತನ ಬಳಿಯಿಂದ 996 ಗ್ರಾಂ ಅತ್ಯುತ್ತಮ ಗುಣಮಟ್ಟದ ಹೆರಾಯಿನ್ ಮತ್ತು 1,65,000 ರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಈತ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಜಾಲದ ಕುರಿತು ಮಾಹಿತಿಗಳನ್ನು ಹೊರಹಾಕಿದ್ದ. ಈ ಮಾಹಿತಿಗಳ ಆಧಾರದಲ್ಲಿ ಪೋಲಿಸರು ದಿಲ್ಲಿಯ ಜಂಗಪುರ ಪ್ರದೇಶದಲ್ಲಿಯ ಶ್ರೀನಗರ ಮೂಲದ ಶಾಝಿಯಾ ಪೀರ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಆರಂಭದಲ್ಲಿ ಆಕೆ ತಲೆ ಮರೆಸಿಕೊಂಡಿದ್ದಳಾದರೂ ನಂತರ ಆಕೆಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದರು. ಈಕೆ ಅಫಘಾನಿಸ್ತಾನ್,ಅಮೆರಿಕ,ಬ್ರಿಟನ್ ಮತ್ತು ಪಂಜಾಬ್‌ನಲ್ಲಿಯ ತನ್ನ ಸಹಚರರ ಕುರಿತು ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಳು. ಫಾಹೀಮ್ ಶಾಝಿಯಾಳ ಅಡಿ ಕೆಲಸ ಮಾಡುತ್ತಿದ್ದು,ಪಂಜಾಬಿಗೆ ಪೂರೈಕೆಯಾಗುತ್ತಿದ್ದ ಮಾದಕ ದ್ರವ್ಯವನ್ನು ತರುವ ಕೆಲಸವನ್ನು ಆತ ಮಾಡುತ್ತಿದ್ದ. ಇದಕ್ಕಾಗಿ ಪ್ರತಿ ಸಲವೂ ಶಾಝಿಯಾ ಆತನಿಗೆ 50,000 ರೂ.ನೀಡುತ್ತಿದ್ದಳು.

ಮಾದಕ ದ್ರವ್ಯ ಅಫಘಾನಿಸ್ತಾನದಿಂದ ಪಾಕಿಸ್ತಾನ ಮತ್ತು ಜಮ್ಮುಕಾಶ್ಮೀರದ ಮೂಲಕ ದಿಲ್ಲಿಯನ್ನು ತಲುಪುತ್ತಿತ್ತು ಎಂದು ಶಾಝಿಯಾ ತಿಳಿಸಿದ್ದಾಳೆ.

ಶಾಝಿಯಾಳ ಸಹಚರರಾದ ಜಾವೇದ್,ಪರ್ಮಿಂದರ್ ಸಿಂಗ್ ಡಿಯೋಲ್ ಅಲಿಯಾಸ್ ಹ್ಯಾರಿ,ಸಲ್ವಿಂದರ್ ಸಿಂಗ್,ರವಿ ಶೇರ್ ಸಿಂಗ್,ವರಿಂದರ್ ಸಿಂಗ್,ಸರಬ್‌ಜೀತ್ ಸಿಂಗ್,ಮಜಿಂದರ್ ಸಿಂಗ್ ಮತ್ತು ಜಶನ್‌ಪ್ರೀತ್ ಸಿಂಗ್ ಅವರನ್ನೂ ಪೋಲಿಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News