ಮಹಾರಾಷ್ಟ್ರ | ಸಾರ್ವಜನಿಕ ಶೌಚಾಲಯ, ರೈಲು ನಿಲ್ದಾಣ ಮತದಾರರ ವಿಳಾಸ : ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪಿಸಿದ ಎಂಎನ್‌ಎಸ್
ಸಾಂದರ್ಭಿಕ ಚಿತ್ರ
ನವಿ ಮುಂಬೈ, ಅ. 30: ನವಿ ಮುಂಬೈ ನಗರದ ಮತದಾರರ ಪಟ್ಟಿಯಲ್ಲಿ ಸಾರ್ವಜನಿಕ ಶೌಚಾಲಯ, ಪಾಲಿಕೆ ಆಯುಕ್ತರ ಕಚೇರಿ ಹಾಗೂ ನೆರುಲ್ ಉಪನಗರ ರೈಲು ನಿಲ್ದಾಣ ಮತದಾರರ ವಿಳಾಸವಾಗಿ ಕಂಡು ಬಂದಿದೆ. ಇದು ನವಿ ಮುಂಬೈ ನಗರದ ಮತದಾರರ ಪಟ್ಟಿಯಲ್ಲಿನ ಗಂಭೀರ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್)ಈ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ ಹಾಗೂ ಮತದಾರರ ಪಟ್ಟಿಯನ್ನು ಕೂಡಲೇ ಪರಿಷ್ಕರಿಸುವಂತೆ ಚುನಾವಣಾಧಿಕಾರಿಗಳನ್ನು ಆಗ್ರಹಿಸಿದೆ.
‘‘ಇಂತಹ ನಮೂದುಗಳನ್ನು ಅಕ್ಷರ ದೋಷಗಳೆದು ತಳ್ಳಿ ಹಾಕಲು ಸಾಧ್ಯವಿಲ್ಲ’’ ಎಂದು ಪಕ್ಷದ ಪ್ರತಿನಿಧಿಗಳು ತಿಳಿಸಿದ್ದಾರೆ.
‘‘ಸಾರ್ವಜನಿಕ ಶೌಚಾಲಯ ಯಾರೊಬ್ಬರ ನಿವಾಸ ಅಲ್ಲ. ಆದರೂ ಅದು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಸಂಪೂರ್ಣವಾಗಿ ದಾರಿ ತಪ್ಪಿದೆ ಎಂಬುದಕ್ಕಿಂತೆ ಇದಕ್ಕಿಂತ ಬೇರೆ ಯಾವ ಪುರಾವೆ ಬೇಕು?’’ ಎಂದು ಎಂಎನ್‌ಎಸ್ ನವಿ ಮುಂಬೈ ಅಧ್ಯಕ್ಷ ಹಾಗೂ ಪಕ್ಷದ ವಕ್ತಾರ ಗಜಾನನ ಕಾಲೆ ತಿಳಿಸಿದ್ದಾರೆ.
ಪಾಲಿಕೆ ಆಯುಕ್ತರ ಅಧಿಕೃತ ನಿವಾಸವೇ 127 ಮತದಾರರ ವಿಳಾಸ ಎಂದು ನಮೂದಾಗಿದೆ. ಇದು ಅನುಮಾನ ಮೂಡಿಸಿದೆ ಎಂದು ಹೇಳಿದ್ದಾರೆ.
‘‘ಇದು ತಾಂತ್ರಿಕ ದೋಷವಲ್ಲ. ಇದು ಉದ್ದೇಶಪೂರ್ವಕ ನಿರ್ಲಕ್ಷ ಅಥವಾ ಪಿತೂರಿಯನ್ನು ಸೂಚಿಸುತ್ತದೆ. ಅಂತಹ ನಕಲಿ ನಮೂದುಗಳು ಚುನಾಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು’’ ಎಂದು ಕಾಲೆ ಹೇಳಿದ್ದಾರೆ.