×
Ad

ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಪಂಜಾಬಿನ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ

Update: 2024-01-05 22:03 IST

ಸುಖ್ಪಾಲ್ ಸಿಂಗ್ ಖೈರಾ | Photo: Sukhpal Singh Khaira/Facebook

ಚಂಡಿಗಡ: 2015ರ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಹಾಗೂ ಹರ್ಯಾಣ ಉಚ್ಛ ನ್ಯಾಯಾಲಯ ಜಾಮೀನು ನೀಡಿದ ಗಂಟೆಗಳ ಬಳಿಕ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಅವರನ್ನು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಮತ್ತೆ ಬಂಧಿಸಲಾಗಿದೆ.

ಕಾಶ್ಮೀರಿ ಸಿಂಗ್ ಹೆಸರಿನ ವ್ಯಕ್ತಿ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಚಂಡಿಗಡದಲ್ಲಿರುವ ಖೈರಾ ಅವರ ಬಂಗಲೆಗೆ ಸೆಪ್ಟಂಬರ್ 28ರಂದು ದಾಳಿ ನಡೆಸಿ ಮಾದಕ ದ್ರವ್ಯ ಹಾಗೂ ಸೈಕೊಟ್ರೋಪಿಕ್ ವಸ್ತು ಕಾಯ್ದೆಗಳ ಅಡಿಯಲ್ಲಿ ಮೊದಲ ಬಾರಿಗೆ ಅವರನ್ನು ಬಂಧಿಸಿದ್ದರು.

ಈ ದಾಳಿಯಲ್ಲಿ 2 ಕಿ.ಗ್ರಾಂ. ಹೆರಾಯಿನ್, 24 ಚಿನ್ನದ ಬಿಸ್ಕಿಟ್, 1 ದೇಶಿ ನಿರ್ಮಿತ ಪಿಸ್ತೂಲ್, ಒಂದು .315 ಬೋರ್ ಪಿಸ್ತೂಲ್ ಹಾಗೂ ಎರಡು ಪಾಕಿಸ್ತಾನದ ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ 2015 ಮಾರ್ಚ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಆರೋಪಗಳಲ್ಲಿ ತಪ್ಪಿತಸ್ಥರಲ್ಲ ಎಂದು ಪರಿಗಣಿಸಿದ ಬಳಿಕ ಖೈರಾ ಅವರಿಗೆ ಉಚ್ಛ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು.

ಆದರೆ, ಜಾಮೀನು ಮಂಜೂರಾದ ಕೂಡಲೇ ಕಾಶ್ಮೀರ ಸಿಂಗ್ ಅವರ ಪತ್ನಿ ರಂಜಿತ್ ಕೌರ್ ಅವರು ಖೈರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 195ಎ ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಅಡಿಯಲ್ಲಿ ಈಗ ಅವರನ್ನು ಬಂಧಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಖೈರಾ ಅವರ ಪುತ್ರ ಮೆಹ್ತಾಬ್ ಖೈರಾ, ಈ ಹೊಸ ಪ್ರಕರಣ ಪಿತೂರಿಯ ಭಾಗ. ಖೈರಾ ಈಗಲೂ ಕಾರಾಗೃಹದಲ್ಲಿ ಇದ್ದಾರೆ. ಅವರು ಬೆದರಿಕೆ ಒಡ್ಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News