×
Ad

'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಪಾಕ್‌ಗೆ ಮಾಹಿತಿ ರವಾನೆ: ಆರೋಪಿ ಗಗನ್‌ದೀಪ್‌ ಸಿಂಗ್ ಬಂಧನ

Update: 2025-06-03 11:25 IST

ಸಾಂದರ್ಭಿಕ ಚಿತ್ರ

ಚಂಡೀಗಢ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯ ಚಲನವಲನಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳೊಂದಿಗೆ ಹಂಚಿಕೊಂಡ ಆರೋಪದಲ್ಲಿ ಪಂಜಾಬ್‌ನ ತರಣ್ ತರಣ್ ಜಿಲ್ಲೆಯ ನಿವಾಸಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ತರಣ್ ತರಣ್ ಜಿಲ್ಲೆಯ ರೋಡುಪುರದ ನಿವಾಸಿ ಗಗನ್‌ದೀಪ್‌ ಸಿಂಗ್ ಅಲಿಯಾಸ್ ಗಗನ್ ಬಂಧಿತ ಆರೋಪಿ. ಈತನಿಂದ ಪಾಕ್ ಏಜೆಂಟ್‌ಗಳೊಂದಿಗೆ ಮಾಹಿತಿ ಹಂಚಿಕೊಂಡ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಗನ್‌ದೀಪ್‌ ಸಿಂಗ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ. ತಾನು ನೀಡಿದ ಮಾಹಿತಿಗೆ ಪ್ರತಿಯಾಗಿ ಪಾಕ್‌ನಿಂದ ಹಣವನ್ನು ಪಡೆದಿದ್ದಾನೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿಜಿಪಿ ಗೌರವ್ ಯಾದವ್, ಬಂಧಿತ ಆರೋಪಿ ಪಾಕಿಸ್ತಾನದ ಐಎಸ್ಐ ಮತ್ತು ಪಾಕಿಸ್ತಾನ ಮೂಲದ ಖಾಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾ ಜೊತೆ ಸಂಪರ್ಕದಲ್ಲಿದ್ದ. ಈತ ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನಾ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News