ಪಂಜಾಬ್, ರಾಜಸ್ಥಾನದಲ್ಲಿ ಕಟ್ಟೆಚ್ಚರ | ಪೊಲೀಸರು, ಅಧಿಕಾರಿಗಳ ರಜೆ ರದ್ದು; ಗಡಿ ಜಿಲ್ಲೆಗಳಲ್ಲಿರುವ ಶಾಲೆಗಳು ಬಂದ್
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ವಿವಿಧ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಒಂದು ದಿನದ ಬಳಿಕ, ರಾಜಸ್ಥಾನ ಮತ್ತು ಪಂಜಾಬನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ಈ ರಾಜ್ಯಗಳ ಪೊಲೀಸ್ ಸಿಬ್ಬಂದಿ ಮತ್ತು ಸರಕಾರಿ ಅಧಿಕಾರಿಗಳ ರಜೆಗಳನ್ನು ರದ್ದುಪಡಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿರುವ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಿಸಿದರೆ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಎದುರಿಸಲು ಪಂಜಾಬ್ ಮತ್ತು ರಾಜಸ್ಥಾನ ಸಿದ್ಧತೆಗಳನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಪಂಜಾಬ್ ಪಾಕಿಸ್ತಾನದೊಂದಿಗೆ 532 ಕಿ.ಮೀ. ಉದ್ದದ ಗಡಿಯನ್ನು ಹೊಂದಿದರೆ, ರಾಜಸ್ಥಾನ ಆ ದೇಶದೊಂದಿಗೆ 1,070 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ.
ಪಂಜಾಬ್ ಪೊಲೀಸ್ ಇಲಾಖೆಯು ತನ್ನ ಎಲ್ಲಾ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿದೆ. ರಾಜ್ಯದ ಆರು ಗಡಿ ಜಿಲ್ಲೆಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ರಾಜಸ್ಥಾನ ಸರಕಾರವೂ ತನ್ನ ಎಲ್ಲಾ ಆಡಳಿತಾತ್ಮಕ ಅಧಿಕಾರಿಗಳ ರಜೆಗಳನ್ನು ರದ್ದುಗೊಳಿಸಿದೆ ಮತ್ತು ಗಡಿ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿದೆ.
‘‘ಆಡಳಿತಾತ್ಮಕ ಕಾರಣಗಳಿಗಾಗಿ’’ ಪಂಜಾಬ್ ಪೊಲೀಸ್‌ನ ಎಲ್ಲಾ ಅಧಿಕಾರಿಗಳು/ಉದ್ಯೋಗಿಗಳ ರಜೆಗಳನ್ನು ಮೇ 7ರಿಂದ ರದ್ದುಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ಹೊರಡಿಸಿದ ಆದೇಶವೊಂದರಲ್ಲಿ ತಿಳಿಸಲಾಗಿದೆ.
ಪಂಜಾಬ್ ನ ಆರು ಗಡಿ ಜಿಲ್ಲೆಗಳಾದ ಫಿರೋಝ್‌ಪುರ, ಪಠಾಣ್‌ಕೋಟ್, ಫಝಿಲ್ಕ, ಅಮೃತಸರ, ಗುರುದಾಸ್‌ಪುರ ಮತ್ತು ತರಣ್ ತಾರಣ್‌ಗಳ ಎಲ್ಲಾ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.
ರಾಜಸ್ಥಾನದಲ್ಲೂ, ನಾಲ್ಲು ಗಡಿ ಜಿಲ್ಲೆಗಳಾದ ಶ್ರೀಗಂಗಾನಗರ, ಬಿಕಾನೆರ್, ಜೈಸಲ್ಮೇರ್ ಮತ್ತು ಬಾರ್ಮೆರ್ ನಲ್ಲಿರುವ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿದೆ.