×
Ad

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ | ಉತ್ತರ ಪ್ರದೇಶ : ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು

Update: 2024-02-24 22:11 IST

Photo: ANI 

ಲಕ್ನೋ: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ಫೆಬ್ರವರಿ 17 ಹಾಗೂ 18ರಂದು ಆಯೋಜಿಸಲಾಗಿದ್ದ ಪೊಲೀಸ್ ಕಾನ್ ಸ್ಟೇಬಲ್ (ಪಿ.ಸಿ.) ನೇಮಕಾತಿ ಪರೀಕ್ಷೆಯನ್ನು ಉತ್ತರಪ್ರದೇಶ ಸರಕಾರವು ಶನಿವಾರ ರದ್ದುಗೊಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡವು ತನಿಖೆ ನಡೆಸಲಿದೆ. ಯಾರ ಕರ್ತವ್ಯಲೋಪದಿಂದ ಈ ಸೋರಿಕೆಗೆ ಕಾರಣವಾಯಿತೋ, ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ರಾಜ್ಯ ಸರಕಾರವು ಆದೇಶಿಸಿದೆ.

ಎರಡು ಪಾಳಿಗಳಲ್ಲಿ ಈ ನೇಮಕಾತಿ ಪರೀಕ್ಷೆ ನಡೆದಿದ್ದು, 48 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಹಾಗೂ 43 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಆದರೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. 50 ಸಾವಿರ ರೂ.ಗಳಿಂದ 2 ಲಕ್ಷ ರೂ. ನಡುವಿನ ದರದಲ್ಲಿ ಪ್ರಶ್ನೆ ಪತ್ರಿಕೆಗಳು ದೊರೆಯುತ್ತದೆಯೆಂದು ಕೆಲವು ಅಭ್ಯರ್ಥಿಗಳು ಆಪಾದಿಸಿದ್ದರು. ಪರೀಕ್ಷೆ ಆರಂಭಕ್ಕೆ 8-12 ತಾಸುಗಳ ಮೊದಲೇ ಈ ಪ್ರಶ್ನೆಪತ್ರಿಕೆಗಳು ಹಲವಾರು ಅಭ್ಯರ್ಥಿಗಳ ಕೈಸೇರಿದ್ದವು ಎಂದು ನೆಟ್ಟಿಗರು ಬಹಿರಂಗಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸ್ ನೇಮಕಾತಿ ಹಾಗೂ ಬಡ್ತಿ ಇಲಾಖೆಯು ಸೋಮವಾರ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಆರೋಪಗಳ ತನಿಖೆಗೆ ಸೋಮವಾರ ಆಂತರಿಕ ಸಮಿತಿಯನ್ನು ರಚಿಸಿತ್ತು.

ಈ ಮಧ್ಯೆ 2024ನೇ ಸಾಲಿನ ಉತ್ತರಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾದ ನೂರಾರು ಅಭ್ಯರ್ಥಿಗಳು ಮರುಪರೀಕ್ಷೆಗೆ ಆಗ್ರಹಿಸಿ ಶುಕ್ರವಾರ ಲಕ್ನೋದ ಇಕೋ ಗಾರ್ಡನ್ ಪ್ರದೇಶದಲ್ಲಿ ಧರಣಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News