55ನೇ ಜನ್ಮದಿನ ಆಚರಿಸಿದ ರಾಹುಲ್
ರಾಹುಲ್‌ಗಾಂಧಿ | PC : X
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಗುರುವಾರ 55ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದು ಅವರಿಗೆ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅವರ ಸಮರ್ಪಣಾ ಮನೋಭಾವ ಹಾಗೂ ಕೋಟ್ಯಂತರ ದಮನಿತರ ಬಗ್ಗೆ ಅವರು ಹೊಂದಿರುವ ಅನುಕಂಪವನ್ನು ಪ್ರಶಂಸಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ರಾಹುಲ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
‘‘ಲೋಕಸಭೆಯ ಪ್ರತಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಆಯುರಾರೋಗ್ಯಭಾಗ್ಯ ದೊರೆಯಲಿದೆ ಎಂದು ಪ್ರಧಾನಿ ಅವರು ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಡಿಎಂಕೆ ನಾಯಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಕೂಡಾ ರಾಹುಲ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ರಕ್ತ ಸಂಬಂಧದಲ್ಲಿ ಅಲ್ಲದಿದ್ದರೂ, ಚಿಂತನೆ, ದೃಷ್ಟಿಕೋನ ಹಾಗೂ ಉದ್ದೇಶಗಳು ಸೇರಿದಂತೆ ಆದರ್ಶಗಳಲ್ಲಿ ರಾಹುಲ್ ತನಗೆ ಸೋದರನೆಂದು ಸ್ಟಾಲಿನ್ ಬಣ್ಣಿಸಿದ್ದಾರೆ.
ಗುರುವಾರ ಮಧ್ಯಾಹ್ನ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಾಲಯಕ್ಕೆ ಆಗಮಿಸಿದ ರಾಹುಲ್ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಹಿರಿಯ ನಾಯಕರು ಸ್ವಾಗತಿಸಿದರು ಮತ್ತು ಅವರಿಗೆ ಪುಷ್ಪಗುಚ್ಚ ಹಾಗೂ ಸಿಹಿತಿಂಡಿಗಳನ್ನು ನೀಡಿ ಅಭಿನಂದಿಸಿದರು.