×
Ad

ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ ಬಿಜೆಪಿ ಯಾಕೆ ಪ್ರತಿಕ್ರಿಯಿಸಬೇಕು?: ಸಂಜಯ್ ರಾವತ್ ಪ್ರಶ್ನೆ

Update: 2025-06-09 20:24 IST

 ಸಂಜಯ್ ರಾವತ್ | PC : NDTV 

ಮುಂಬೈ: ಚುನಾವಣಾ ಆಯೋಗವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಪ್ರತಿಪಕ್ಷಗಳು ಎತ್ತಿರುವ ಅನುಮಾನಗಳನ್ನು ನಿವಾರಿಸಲು ಚುನಾವಣಾ ಆಯೋಗ ಆಡಳಿತಾರೂಢ ಬಿಜೆಪಿ ಜೊತೆಗೆ ‘‘ಒಪ್ಪಂದ’’ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.

2024ರ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ‘‘ಮ್ಯಾಚ್ ಫಿಕ್ಸಿಂಗ್’’ ಹಾಗೂ ‘‘ರಿಗ್ಗಿಂಗ್’’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವಿವಾರ ಪತ್ರಿಕೆಯೊಂದರಲ್ಲಿ ಲೇಖನ ಬರೆದ ಬಳಿಕ ಸಂಜಯ್ ರಾವತ್ ಅವರು ಈ ಹೇಳಿಕೆ ನೀಡಿದ್ದಾರೆ.

ಪೂರಕವಲ್ಲದ ಫಲಿತಾಂಶದ ಬಳಿಕ ಚುನಾವಣಾ ಆಯೋಗವನ್ನು ಅವಮಾನಿಸುವುದು ಸಂಪೂರ್ಣ ಅಸಂಬದ್ಧವಾಗಿದೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ಆರೋಪವನ್ನು ತಿರಸ್ಕರಿಸಿತ್ತು.

ರಾಹುಲ್ ಗಾಂಧಿ ಅವರ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಫಡ್ನವಿಸ್ ತನ್ನ ಲೇಖನದಲ್ಲಿ, ರಾಹುಲ್ ಗಾಂಧಿ ಅವರು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಹಾಗೂ ಜನಾದೇಶವನ್ನು ನಿರಂತರ ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ‘‘ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಪ್ರಶ್ನೆ ಕೇಳಿರುವುದು. ಬಿಜೆಪಿಗೆ ಅಲ್ಲ. ದೇವೇಂದ್ರ ಫಡ್ನವಿಸ್ ಅವರು ಯಾಕೆ ಪ್ರತಿಕ್ರಿಯಿಸಬೇಕು ? ಚುನಾವಣಾ ಆಯೋಗ ತನ್ನ ಮುಖದ ದೂಳನ್ನು ಒರೆಸಲು ಹಾಗೂ ತನ್ನ ಕಾರ್ಯವೈಖರಿಯ ಕುರಿತ ಅನುಮಾನಗಳನ್ನು ಪರಿಹರಿಸಲು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯೇ?’’ ಎಂದು ಪ್ರಶ್ನಿಸಿದ್ದಾರೆ.

ಈ ವಿಷಯ ಕೇವಲ ಚುನಾವಣೆಗಳ ಬಗ್ಗೆ ಅಲ್ಲ. ಬದಲಾಗಿ ಕಳೆದ 10 ವರ್ಷಗಳಲ್ಲಿ ಚುನಾವಣಾ ಆಯೋಗದ ನಡವಳಿಕೆ ಬಗ್ಗೆ ಎಂದು ಅವರು ಹೇಳಿದರು.

‘‘ಶಿವಸೇನಾ ವಿಭಜನೆಗೆ ಕಾರಣವಾದ ಚುನಾವಣಾ ಆಯೋಗ ಅದರ ಸ್ಥಾಪಕ ಶರದ್ ಪವಾರ್ ಇನ್ನೂ ಇರುವಾಗಲೇ ಎನ್‌ಸಿಪಿಯನ್ನು ಅಜಿತ್ ಪವಾರ್ ಅವರಿಗೆ ಹಸ್ತಾಂತರಿಸಿದೆ. ಇದೆಲ್ಲವನ್ನೂ ಚುನಾವಣೆಯಲ್ಲಿ ಜಯ ಗಳಿಸಲು ಕೇಂದ್ರ ಸಚಿವ ಅಮಿತ್ ಶಾ ಅವರ ಒತ್ತಡದ ಮೇರೆಗೆ ಮಾಡಲಾಯಿತು. ಈ ಪ್ರಶ್ನೆಗಳಿಗೆ ಕೂಡ ಚುನಾವಣಾ ಆಯೋಗ ಉತ್ತರಿಸಬೇಕು’’ ಎಂದು ಸಂಜಯ್ ರಾವತ್ ಪ್ರತಿಪಾದಿಸಿದ್ದಾರೆ.

ಚುನಾವಣಾ ಆಯೋಗ ಪಂಜರದ ಒಳಗಿರುವ ಗಿಣಿ. ಅದು ತನ್ನ ಆತ್ಮವನ್ನು ಮಾರಿಕೊಂಡು ಬಿಜೆಪಿಯ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಜಯ್ ರಾವತ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News