×
Ad

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಅಕ್ರಮ: ರಾಹುಲ್ ಗಾಂಧಿ ಆರೋಪ

Update: 2025-07-23 21:54 IST

ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ, ಜು. 23: ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಅಕ್ರಮ ನಡೆದಿದೆ. ಕಾಂಗ್ರೆಸ್ ಈ ಕಾರ್ಯ ವಿಧಾನವನ್ನು ಪತ್ತೆ ಹಚ್ಚಿದೆ. ಆದುದರಿಂದ ಚುನಾವಣಾ ಆಯೋಗ ಬಿಹಾರದಲ್ಲಿ ತನ್ನ ಕಾರ್ಯವಿಧಾನವನ್ನು ಬದಲಾಯಿಸುವ ಅನಿವಾರ್ಯತೆಗೆ ಒಳಗಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಸಂಕ್ಷಿಪ್ತ ಸಂವಾದದ ಸಂದರ್ಭ ಅವರು ಮೊದಲು ಈ ಆರೋಪ ಮಾಡಿದರು. ಅನಂತರ ಈ ಆರೋಪವನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದರು ಹಾಗೂ ಜನತೆಗೆ ಶೀಘ್ರದಲ್ಲಿ ವಿವರಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

‘‘ಭಾರತದಲ್ಲಿ ಚುನಾವಣೆಯಲ್ಲಿ ಮತ ಕಳವುಗೈಯಲಾಗಿದೆ. ಇದು ಸತ್ಯ. ಮಹಾರಾಷ್ಟ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಹೇಗೆ ನಡೆದಿದೆ ಎಂದು ನಾವು ಪ್ರತಿಯೊಬ್ಬರಿಗೂ ತೋರಿಸುತ್ತೇವೆ. ನಾವು ಕರ್ನಾಟಕದಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲಿ ತನಿಖೆ ನಡೆಸಿದ್ದೇವೆ. ಅಲ್ಲಿ ದೊಡ್ಡ ಪ್ರಮಾಣದ ಮತ ಕಳವುಗೈದಿರುವುದು ಪತ್ತೆಯಾಗಿದೆ. ನಾವು ಶೀಘ್ರದಲ್ಲಿ ಇದನ್ನು ಜನರ ಮುಂದೆ ತರಲಿದ್ದೇವೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್‌ ನಲ್ಲಿ ಅವರು ಹೇಳಿದ್ದಾರೆ

‘‘ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಹೆಸರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ಸಹೋದರ ಹಾಗೂ ಸಹೋದರಿಯರ ಮತ ಕಳವುಗೈಯಲಾಗುತ್ತಿದೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇಂಡಿಯಾ ಮೈತ್ರಿಕೂಟ ಜನರ ಹಕ್ಕಿಗಾಗಿ ಸಂಸತ್ತಿನಿಂದ ಬೀದಿಯ ವರೆಗೆ ಹೋರಾಟ ನಡೆಸಲಿದೆ’’ ಎಂದು ಅವರು ಹೇಳಿದರು.

ಬುಧವಾರ ಬೆಳಗ್ಗೆ ರಾಹುಲ್ ಗಾಂಧಿ ಅವರು ಕಪ್ಪು ಶಾಲು ಧರಿಸಿ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಸೇರಿದಂತೆ ಇತರ ಪ್ರತಿಪಕ್ಷಗಳ ನಾಯಕರೊಂದಿಗೆ ಸಂಸತ್‌ ನಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧದ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಪ್ರತಿಭಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಬಿಹಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಕೂಡ ಈ ವಂಚನೆ ನಡೆದಿದೆ. ಅಲ್ಲಿ ಮತದರಾರ ಪಟ್ಟಿಯನ್ನು ಹಾಗೂ ಮತದಾನ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಅನ್ನು ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಈ ಹಿಂದೆ ಚುನಾವಣಾ ಆಯೋಗ ಹರ್ಯಾಣ ಹಾಗೂ ಮಹಾರಾಷ್ಟ್ರದಲ್ಲಿ ಯಾವುದೇ ಅಕ್ರಮ ಎಸಗಿಲ್ಲ ಎಂದು ಹೇಳಿತ್ತು ಎಂದು ಅವರು ಹೇಳಿದ್ದಾರೆ.

‘‘ನಾವು ಕರ್ನಾಟಕದಲ್ಲಿ ಸ್ಪಲ್ಪ ಸಂಶೋಧನೆ ಮಾಡಿದ್ದೇವೆ. ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರವೊಂದರಲ್ಲಿ ಮತ ಕದಿಯಲಾಗಿದೆ ಎಂದು ನಾವು ಪತ್ತೆ ಹಚ್ಚಿದ್ದೇವೆ. ನಾನು ಇದನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಆಗಿ ನಿಮಗೆ ಹಾಗೂ ಚುನಾವಣಾ ಆಯೋಗಕ್ಕೆ ತೋರಿಸುತ್ತೇನೆ. ನಾವು ಅವರ ಕಳ್ಳಾಟವನ್ನು ಪತ್ತೆ ಮಾಡಿದ್ದೇವೆ ಎಂದು ಅವರು ತಿಳಿದಿದ್ದಾರೆ ಹಾಗೂ ತಮ್ಮ ಕಳ್ಳಾಟವನ್ನು ಬದಲಾಯಿಸಿದ್ದಾರೆ’’ ಎಂದು ಅವರು ಹೇಳಿದರು.

‘‘ಅವರು ಮತದಾರರ ಪಟ್ಟಿಯನ್ನು ಕಾಗದದಲ್ಲಿ ನೀಡುತ್ತಾರೆ. ಅಂತಹ ಮತದಾರರ ಪಟ್ಟಿಯನ್ನು ನಮಗೆ ವಿಶ್ಲೇಷಿಸಲು ಸಾಧ್ಯವಿಲ್ಲ. ಇದು ಸಮಸ್ಯೆ. ಆದುದರಿಂದ ನಾವು ಮತದಾರರ ಪಟ್ಟಿಯನ್ನು ಸಂಗ್ರಹಿಸಿದೆವು. ಅದನ್ನು ಡಿಜಿಟಲೀಕರಣ ಮಾಡಿದೆವು. ಇದಕ್ಕೆ 6 ತಿಂಗಳು ಹಿಡಿಯಿತು. ಯಾರು ತಮ್ಮ ಮತ ಹಾಕುತ್ತಾರೆ, ಮತದಾರರನ್ನು ಹೇಗೆ ನೋಂದಾಯಿಸಲಾಗುತ್ತದೆ ಎಂಬಂತಹ ಅವರ ವ್ಯವಸ್ಥೆಯನ್ನು ನಾವು ಪತ್ತೆ ಮಾಡಿದ್ದೇವೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ, ರಾಹುಲ್ ಗಾಂಧಿ ಅವರು ಆ ಕ್ಷೇತ್ರ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News