×
Ad

ಐಪಿಎಸ್ ಅಧಿಕಾರಿಯ ಸಾವಿನಿಂದ ದಲಿತರಿಗೆ ತಪ್ಪು ಸಂದೇಶ: ರಾಹುಲ್ ಗಾಂಧಿ

Update: 2025-10-14 22:04 IST

ರಾಹುಲ್ ಗಾಂಧಿ | Photo Credit : AICC 

ಚಂಡೀಗಢ: ಹರ್ಯಾಣದ ದಲಿತ ಪೊಲೀಸ್ ಅಧಿಕಾರಿ ವೈ. ಪೂರನ್ ಕುಮಾರ್‌ರ ಸಾವಿಗೆ ಸಂಬಂಧಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಯನ್ನು ಒತ್ತಾಯಿಸಿದ್ದಾರೆ.

ಐಪಿಎಸ್ ಅಧಿಕಾರಿ ಪೂರನ್ ಕುಮಾರ್ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯು ಎಲ್ಲಾ ದಲಿತ ಕುಟುಂಬಗಳನ್ನು ಬಾಧಿಸುತ್ತದೆ ಎಂದು ಹೇಳಿದರು.

ಪೂರನ್‌ರ ಮನೋಸ್ಥೈರ್ಯವನ್ನು ನಾಶಪಡಿಸುವ ಮತ್ತು ಅವರ ವೃತ್ತಿಜೀವನಕ್ಕೆ ಹಾನಿ ಮಾಡುವ ಉದ್ದೇಶದಿಂದ ಅವರ ವಿರುದ್ಧ ವ್ಯವಸ್ಥಿತ ತಾರತಮ್ಯ ಮಾಡಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಅವರು ಬೆಳಗ್ಗೆ 11 ಗಂಟೆಯ ಸುಮಾರಿಗೆ ಚಂಡೀಗಢದ ಸೆಕ್ಟರ್ 24ರಲ್ಲಿರುವ ಪೂರನ್ ಕುಮಾರ್‌ರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅವರು ದಿವಂಗತ ಐಪಿಎಸ್ ಅಧಿಕಾರಿಗೆ ಪುಷ್ಪಾಂಜಲಿ ಸಲ್ಲಿಸಿದರು.

ಪೂರನ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಸನ್ನಿವೇಶಗಳ ಬಗ್ಗೆ ಪ್ರತಿಪಕ್ಷಗಳು ಹರ್ಯಾಣ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಹರ್ಯಾಣ ಸರಕಾರದ ವಿರುದ್ಧ ಕಿಡಿಗಾರಿದ ಅವರು, ಮುಕ್ತ ಮತ್ತು ನ್ಯಾಯೋಚಿತ ತನಿಖೆ ನಡೆಸುವ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು. ಐಪಿಎಸ್ ಅಧಿಕಾರಿಯ ಆತ್ಮಹತ್ಯೆಯು ದಲಿತರಿಗೆ ತಪ್ಪು ಸಂದೇಶವನ್ನು ಕಳುಹಿಸಿದೆ ಎಂದು ಅವರು ಹೇಳಿದರು.

‘‘ಪೂರನ್ ಕುಮಾರ್‌ರ ಪತ್ನಿ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯಾಗಿದ್ದಾರೆ. ಅವರ ಮೇಲೆ ಹೇಗೆ ಒತ್ತಡ ಹಾಕಬಹುದು ಎನ್ನುವುದು ನಮಗೆಲ್ಲಾ ಗೊತ್ತಿದೆ. ಹಾಗಾಗಿ, ಈ ಪ್ರಕರಣದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು’’ ಎಂದು ಅವರು ಹೇಳಿದರು.

‘‘ನೀವು ಎಷ್ಟೇ ಯಶಸ್ಸು ಪಡೆದರೂ ನೀವು ದಲಿತರಾದರೆ ನಿಮ್ಮನ್ನು ತುಳಿಯಬಹುದು ಎನ್ನುವ ಸಂದೇಶವನ್ನು ಅವರು ಕೊಟ್ಟಿದ್ದಾರೆ’’ ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News