"ಮತಗಳ್ಳತನ ರಾಷ್ಟ್ರವಿರೋಧಿ ಕೃತ್ಯ": ಮತದಾರರ ಬೆರಳುಗಳಿಗೆ ಮಸಿ ಬಳಿಯಲು ಮಾರ್ಕರ್ ಪೆನ್ ಬಳಕೆ ಕುರಿತ ಆರೋಪಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಬೃಹನ್ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಟ್ರ ನಾಗರಿಕ ಸಂಸ್ಥೆಯ ಚುನಾವಣೆಯ ಸಮಯದಲ್ಲಿ ಮತದಾರರ ಬೆರಳುಗಳಿಗೆ ಮಸಿ ಬಳಿಯಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ ನಾಗರಿಕರಲ್ಲಿ ಗೊಂದಲವುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಜನರಲ್ಲಿ ಗೊಂದಲವುಂಟು ಮಾಡುತ್ತಿರುವುದರಿಂದ ನಮ್ಮ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕುಸಿದಿದೆ. ಮತಗಳ್ಳತನ ರಾಷ್ಟ್ರವಿರೋಧಿ ಕೃತ್ಯವಾಗಿದೆ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಬೆರಳುಗಳಿಗೆ ಗುರುತು ಮಾಡಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಚುನಾವಣಾ ಅಕ್ರಮಗಳಿಗೆ ನೆರವಾಗಲಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿತ್ತು.
ಮತ ಚಲಾವಣೆ ಮಾಡುವಾಗ ಬೆರಳಿಗೆ ಮಾರ್ಕರ್ ನಲ್ಲಿ ಗುರುತು ಹಾಕುತ್ತಿರುವುದರಿಂದ, ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಅದನ್ನು ಅಳಿಸಿ ಹಾಕಬಹುದಾಗಿದೆ ಎಂದು ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ ಕೆಲವು ಮತದಾರರು ಆರೋಪಿಸಿದ್ದರು.
Election commission gaslighting citizens is how trust has collapsed in our democracy.
— Rahul Gandhi (@RahulGandhi) January 16, 2026
Vote Chori is an anti-national act. pic.twitter.com/3FZKkDPwDg