ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಧಿಸೂಚನೆ ಪ್ರಕಟ
ನಡ್ಡಾ ಉತ್ತರಾಧಿಕಾರಿಯಾಗಿ ನಿತಿನ್ ನಬೀನ್ ಆಯ್ಕೆ ಬಹುತೇಕ ಖಚಿತ
ನಿತಿನ್ ನಬೀನ್ (Photo: bjp.org)
ಹೊಸದಿಲ್ಲಿ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಚುನಾವಣೆಗೆ ಬಿಜೆಪಿ ಶುಕ್ರವಾರ ಅಧಿಸೂಚನೆ ಪ್ರಕಟಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಕೆಯಾಗಲಿದೆ ಹಾಗೂ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.
ಅಧಿಸೂಚನೆಯ ಪ್ರಕಾರ, ಸೋಮವಾರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಸಂಜೆ 5ರಿಂದ 6 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
“ಒಂದು ವೇಳೆ ಅಗತ್ಯ ಬಿದ್ದರೆ ಮಂಗಳವಾರ ಚುನಾವಣೆ ನಡೆಸಲಾಗುವುದು. ಫಲಿತಾಂಶದ ಪ್ರಕಟನೆಯನ್ನೂ ಅದೇ ದಿನ ಮಾಡಲಾಗುವುದು” ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದು, ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಬದಲಿಗೆ ಕಾರ್ಯಾಧ್ಯಕ್ಷ ನಿತಿನ್ ನಬೀನ್ ರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸುವುದು ಬಹುತೇಕ ಖಚಿತವಾಗಿದೆ ಎಂದು hindustantimes.com ವರದಿ ಮಾಡಿದೆ.
ಜೆ.ಪಿ.ನಡ್ಡಾ ಕೂಡಾ 2019ರಲ್ಲಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು, ಜನವರಿ 2020ರಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಡಿಸೆಂಬರ್ 14ರಂದು ಬಿಜೆಪಿ ಐದು ಬಾರಿಯ ಶಾಸಕ ಹಾಗೂ ಬಿಹಾರ ಸಚಿವ ನಬೀನ್ ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪ್ರಕಟಿಸಿತ್ತು.