ಪೂಂಚ್‌ನಲ್ಲಿ ಪಾಕಿಸ್ತಾನಿ ಶೆಲ್ ದಾಳಿಯಿಂದ ಅನಾಥರಾದ 22 ಮಕ್ಕಳ ಶಿಕ್ಷಣಕ್ಕೆ ನೆರವಾಗಲಿರುವ ರಾಹುಲ್ ಗಾಂಧಿ
Photo credit: PTI
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಗಡಿಯಾಚೆಗಿನ ಸಂಘರ್ಷದಲ್ಲಿ ತಮ್ಮ ಹೆತ್ತವರನ್ನು, ಪೋಷಕರನ್ನು ಕಳೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ಮಕ್ಕಳಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೆರವು ನೀಡಲಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಯ ನಂತರ ಅನಾಥರಾಗಿದ್ದ ಈ ಮಕ್ಕಳ ಶಿಕ್ಷಣಕ್ಕೆ ಗಾಂಧಿಯವರು ಸಂಪೂರ್ಣವಾಗಿ ಆರ್ಥಿಕ ಬೆಂಬಲ ನೀಡಲಿದ್ದಾರೆ. ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸುವವರೆಗೆ ಈ ಬೆಂಬಲ ಮುಂದುವರಿಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಅವರನ್ನು ಉಲ್ಲೇಖಿಸಿ The Indian Express ವರದಿ ಮಾಡಿದೆ.
ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಸಾಧ್ಯವಾಗುವಂತೆ ಈ ವಾರ ನೆರವಿನ ಪ್ರಥಮ ಕಂತು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಮೇ ತಿಂಗಳಲ್ಲಿ ಪೂಂಚ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಧಿಯವರು ಸ್ಥಳೀಯ ಪಕ್ಷದ ನಾಯಕರ ಬಳಿ ಅನಾಥ ಮಕ್ಕಳ ಪಟ್ಟಿಯನ್ನು ಸಂಗ್ರಹಿಸುವಂತೆ ಕೇಳಿಕೊಂಡರು. ಬಳಿಕ ಸಮೀಕ್ಷೆಯನ್ನು ನಡೆಸಲಾಯಿತು. ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದ ನಂತರ ನೆರವು ನೀಡಲು ಮಕ್ಕಳ ಹೆಸರುಗಳನ್ನು ಅಂತಿಮಗೊಳಿಸಲಾಯಿತು.
ತಮ್ಮ ಭೇಟಿಯ ಸಮಯದಲ್ಲಿ, ಗಾಂಧಿಯವರು ಕ್ರೈಸ್ಟ್ ಪಬ್ಲಿಕ್ ಶಾಲೆಯಲ್ಲಿ ಶೆಲ್ ದಾಳಿಯಲ್ಲಿ ಮಡಿದ 12 ವರ್ಷದ ಅವಳಿ ಮಕ್ಕಳಾದ ಉರ್ಬಾ ಫಾತಿಮಾ ಮತ್ತು ಜೈನ್ ಅಲಿ ಅವರ ಸಹಪಾಠಿಗಳನ್ನು ಭೇಟಿಯಾದರು. ಮಕ್ಕಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೆಲವು ಸಾಂತ್ವನದ ಮಾತುಗಳನ್ನು ಹೇಳಿದ್ದರು.