ಒಡಿಶಾ: ಮಾವೋವಾದಿಗಳಿಂದ ರೈಲ್ವೆ ಹಳಿ ಸ್ಫೋಟ; ಟ್ರ್ಯಾಕ್ ಮ್ಯಾನ್ ಮೃತ್ಯು, ಇನ್ನೋರ್ವನಿಗೆ ಗಾಯ
Photo : odishatv
ರೂರ್ಕೆಲಾ,ಆ.3: ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ರೈಲ್ವೆ ಹಳಿಯನ್ನು ಶಂಕಿತ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟಿಸಿದ್ದು, ಘಟನೆಯಲ್ಲಿ ಓರ್ವ ರೈಲ್ವೆ ಟ್ರ್ಯಾಕ್ ಮನ್ ಸಾವನ್ನಪ್ಪಿದ್ದಾನೆ ಹಾಗೂ ಇನೋರ್ವ ಗಾಯಗೊಂಡಿದ್ದಾನೆ.
ಮೃತ ರೈಲ್ವೆ ಟ್ರ್ಯಾಕ್ ಮನ್ ನನ್ನು ಅಟುವಾ ಓರಾಂ (37) ಎಂದು ಗುರುತಿಸಲಾಗಿದೆ. ಅವರ ಸಹದ್ಯೋಗಿ ಬುದುವಾ ಮುಂಡಾ (35) ಗಾಯಗೊಂಡವರು. ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯು ಆಚರಿಸುತ್ತಿರುವ ಹುತಾತ್ಮರ ಸಪ್ತಾಹದ ಕೊನೆಯ ದಿನದಂದು ಈ ಘಟನೆ ನಡೆದಿದೆ. ಕೆ.ಬಾಲಂಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧ್ವಂಸ ಕೃತ್ಯ ವರದಿಯಾಗಿದ್ದು, ಇದು ಮಾವೋವಾದಿಗಳ ಭದ್ರಕೋಟೆಯೆನಿಸಿರುವ ಜಾರ್ಖಂಡ್ ನ ಸಾರಂಡಾ ಅರಣ್ಯ ಪ್ರದೇಶದ ಸಮೀಪದಲ್ಲಿದೆ.
ಗಾಯಾಳುವನ್ನು ಚಿಕಿತ್ಸೆಗಾಗಿ ರೂರ್ಕೆಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೂರ್ಕೆಲಾ ಪೊಲೀಸ್ ಅಧೀಕ್ಷಕ ನಿತೀಶ್ ವಾಧ್ವಾಹಿ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾರೆ.