×
Ad

ರೈಲ್ವೆಯಲ್ಲಿ ವಿಮಾನ ನಿಲ್ದಾಣ ಮಾದರಿಯ ನಿಯಮ : ಲಗೇಜ್‌ಗೆ ತೂಕ ಮಿತಿ ನಿಗದಿ, ಹೆಚ್ಚುವರಿಗೆ ದಂಡ

Update: 2025-08-20 12:07 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಲಗೇಜ್ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ನಿಯಮಗಳು ವಿಮಾನ ಪ್ರಯಾಣದ ವೇಳೆ ಅನುಸರಿಸುವ ನಿಯಮಗಳಂತೆಯೇ ಇರುತ್ತದೆ ಎಂದು ವರದಿಯಾಗಿದೆ.

ಪ್ರಸ್ತಾವಿತ ನಿಯಮಗಳ ಪ್ರಕಾರ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ಎಲೆಕ್ಟ್ರಾನಿಕ್ ತೂಕ ಯಂತ್ರದಲ್ಲಿ ತೂಕ ಮಾಡಲಾಗುತ್ತದೆ. ತೂಕದ ಮಿತಿಗಳನ್ನು ರೈಲುಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಲಗೇಜ್ ನಿಗದಿತ ಮಿತಿಗಿಂತ ಹೆಚ್ಚು ತೂಕ ಅಥವಾ ಗಾತ್ರವನ್ನು ಹೊಂದಿದ್ದರೆ ಬ್ಯಾಗ್‌ಗಳಿಗೆ ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ಲಗೇಜ್ ನಿಗದಿತ ತೂಕದ ಮಿತಿಯೊಳಗೆ ಇದ್ದೂ, ಅದರ ಗಾತ್ರವು ತುಂಬಾ ದೊಡ್ಡದಾಗಿದ್ದರೆ, ಇದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುತ್ತದೆ. ಅಂತಹ ಲಗೇಜ್‌ಗಳಿಗೂ ದಂಡ ವಿಧಿಸಲಾಗುತ್ತದೆ.

ಇದಲ್ಲದೆ ಭಾರತೀಯ ರೈಲ್ವೆ ನವೀಕರಿಸಿದ ನಿಲ್ದಾಣಗಳಲ್ಲಿ ಪ್ರೀಮಿಯಂ ಬ್ರಾಂಡ್ ಮಳಿಗೆಗಳನ್ನು ತೆರೆಯಲು ಯೋಜಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ವಸ್ತ್ರ ಮಳಿಗೆಗಳು, ಪಾದರಕ್ಷೆಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡಲಿದೆ. ಪ್ರಯಾಣಿಕರಿಗೆ ಅನುಕೂಲತೆಯನ್ನು ಹೆಚ್ಚಿಸುವುದು, ಇಲಾಖೆಗೆ ಹೆಚ್ಚುವರಿ ಆದಾಯವನ್ನು ಗಳಿಸುವುದು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಆಧುನಿಕ, ವಿಮಾನ ನಿಲ್ದಾಣ ಶೈಲಿಯ ವಾತಾವರಣವನ್ನು ನಿರ್ಮಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಪ್ರಯಾಣದ ದರ್ಜೆಗೆ ಅನುಗುಣವಾಗಿ ಲಗೇಜ್‌ಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಎಸಿ ಫಸ್ಟ್ ಕ್ಲಾಸ್ ಬೋಗಿಗಳಲ್ಲಿ 70 ಕೆ.ಜಿ, ಎಸಿ ಎರಡನೇ ಶ್ರೇಣಿಗೆ 50 ಕೆ.ಜಿ, ಎಸಿ ಮೂರನೇ ಶ್ರೇಣಿ ಮತ್ತು ಸ್ಲೀಪರ್ ಕ್ಲಾಸ್‌ಗೆ 40 ಕೆ.ಜಿ, ಜನರಲ್‌ ಬೋಗಿಗಳಲ್ಲಿ ಲಗೇಜ್‌ಗಳಿಗೆ 35 ಕೆ.ಜಿ.ತೂಕದ ಮಿತಿಯನ್ನು ನಿಗದಿಪಡಿಸಲಾಗಿದೆ.

ಈ ಕ್ರಮವು ಹೆಚ್ಚು ಪರಿಣಾಮಕಾರಿ ಮತ್ತು ಆರಾಮದಾಯಕ ಪ್ರಯಾಣದ ಗುರಿಯನ್ನು ಹೊಂದಿದೆ ಎಂದು ಪ್ರಯಾಗ್‌ರಾಜ್‌ ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹಿಮಾಂಶು ಶುಕ್ಲಾ ಹೇಳಿದರು.

ಆರಂಭಿಕ ಹಂತದಲ್ಲಿ ಪ್ರಯಾಗ್‌ರಾಜ್‌ ಜಂಕ್ಷನ್, ಪ್ರಯಾಗ್‌ರಾಜ್‌ ಛೋಕಿ, ಸುಬೇದಾರ್ಗಂಜ್, ಕಾನ್ಪುರ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ ಜಂಕ್ಷನ್, ಗೋವಿಂದಪುರಿ ಸೇರಿದಂತೆ ಕೆಲ ನಿಲ್ದಾಣಗಳಲ್ಲಿ ನವೀಕರಣ ಕ್ರಮವನ್ನು ಕೈಗೊಳ್ಳಲಾವುದು. ಪ್ರಯಾಣಿಕರು ತಮ್ಮ ಜೊತೆಗಿರುವ ಲಗೇಜ್‌ಗಳನ್ನು ತೂಕ ನಡೆಸಿದ ಬಳಿಕವೇ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಕ್ಕೆ ಅನುಮತಿಸಲಾಗುತ್ತದೆ ಎಂದು ಹಿಮಾಂಶು ಶುಕ್ಲಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News