ವಿಮಾನ ಸಂಚಾರ ಅಸ್ತವ್ಯಸ್ತ: 3 ದಿನಗಳಲ್ಲಿ 89 ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ ರೈಲ್ವೇಸ್
Photo - PTI
ಹೊಸದಿಲ್ಲಿ: ಇಂಡಿಗೊ ವಿಮಾನಯಾನಗಳ ಬೃಹತ್ ಪ್ರಮಾಣದ ರದ್ದತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರಿಗೆ ನೆರವಾಗುವುದಕ್ಕಾಗಿ ಶನಿವಾರದಿಂದ ಆರಂಭಿಸಿ ಮೂರು ದಿನಗಳ ಕಾಲ ದೇಶದ ಎಲ್ಲಾ ವಲಯಗಳಲ್ಲಿ 89 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೇಸ್ ಘೋಷಿಸಿದೆ.
ಹೊಸದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಮತ್ತು ಹೌರಾ ಮುಂತಾದ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಅತ್ಯಂತ ಕಡಿಮೆ ಸಂಭಾವ್ಯ ಸಮಯದಲ್ಲಿ ಈ ರೈಲುಗಳನ್ನು ನಿಯೋಜಿಸಲಾಗಿದೆ. ಈ ರೈಲುಗಳು 100ಕ್ಕೂ ಅಧಿಕ ಯಾನಗಳನ್ನು ಕೈಗೊಳ್ಳುತ್ತವೆ ಎಂದು ರೈಲ್ವೇಸ್ ತಿಳಿಸಿದೆ.
‘‘ಸಂಚಾರ ಪರಿಸ್ಥಿತಿಯನ್ನು ಹೊಂದಿಕೊಂಡು ವಿಶೇಷ ರೈಲುಗಳು ಮತ್ತು ಅವುಗಳ ಯಾನಗಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ವಿಮಾನಗಳ ರದ್ದತಿಯಿಂದಾಗಿ ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ಲಕ್ಷಾಂತರ ಪ್ರಯಾಣಿಕರಿಗಾಗಿ ರೈಲುಗಳನ್ನು ಸುರಕ್ಷಿತವಾಗಿ ಓಡಿಸಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಎಲ್ಲಾ ರೈಲ್ವೇ ವಲಯಗಳಿಗೆ ಸೂಚಿಸಲಾಗಿದೆ’’ ಎಂದು ರೈಲ್ವೇ ಮಂಡಳಿಯ ವಾರ್ತಾ ಮತ್ತು ಪ್ರಚಾರ ವಿಭಾಗದ ಕಾರ್ಯಕಾರಿ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಸಂಸದೀಯ ಸಮಿತಿಯಿಂದ ವಿಮಾನಯಾನ ಸಂಸ್ಥೆಗಳಿಗೆ ಸಮನ್ಸ್?:
ಇಂಡಿಗೊ ವಿಮಾನಯಾನಗಳ ಬೃಹತ್ ಪ್ರಮಾಣದ ರದ್ದತಿಯಿಂದಾಗಿ ಉದ್ಭವಿಸಿದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸಂಸದೀಯ ಸಮಿತಿಯೊಂದು ಖಾಸಗಿ ವಿಮಾನಯಾನ ಸಂಸ್ಥೆಗಳು ಮತ್ತು ನಾಗರಿಕ ವಾಯಯಾನ ಮಹಾ ನಿರ್ದೇಶನಾಲಯದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಜೆಡಿಯು ನಾಯಕ ಸಂಜಯ್ ಝಾ ಅಧ್ಯಕ್ಷತೆಯ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು, ವಿಮಾನ ಸೇವೆಗಳಲ್ಲಿ ತಲೆದೋರಿರುವ ಅವ್ಯವಸ್ಥೆಗೆ ಕಾರಣ ಮತ್ತು ಸಂಭಾವ್ಯ ಪರಿಹಾರಗಳ ಬಗ್ಗೆ ವಿಮಾನಯಾನ ಸಂಸ್ಥೆಗಳು, ಡಿಜಿಸಿಎ ಮತ್ತು ನಾಗರಿಕ ವಾಯುಯಾನ ಸಚಿವಾಲಯದ ಹಿರಿಯ ಅಧಿಕಾರಿಗಳಿಂದ ವಿವರಣೆ ಕೇಳುವ ಸಾಧ್ಯತೆಯಿದೆ.
ವಿಮಾನಯಾನಗಳ ವ್ಯತ್ಯಯದಿಂದಾಗಿ ಲಕ್ಷಾಂತರ ಪ್ರಯಾಣಿಕರು ಅನುಭವಿಸಿರುವ ಸಂಕಷ್ಟವನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ ಎಂದು ಅದರ ಸದಸ್ಯರೊಬ್ಬರು ತಿಳಿಸಿದರು.
ಚಳಿಗಾಲದ ಅಧಿವೇಶನಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿರುವ ಸಂಸದರು ಕೂಡ ವಿಮಾನ ರದ್ದತಿಗಳು ಮತ್ತು ವಿಳಂಬದ ಪರಿಣಾಮವನ್ನು ಎದುರಿಸಿದ್ದಾರೆ ಎಂದು ಅವರು ಹೇಳಿದರು.