×
Ad

ರಾಜಸ್ಥಾನದಲ್ಲಿ ಕಟ್ಟೆಚ್ಚರ; 4 ಗಡಿ ಜಿಲ್ಲೆಗಳಲ್ಲಿ ಶಾಲೆ, ಸರಕಾರಿ ಕಚೇರಿಗಳು ಬಂದ್

Update: 2025-05-07 20:17 IST

ಸಾಂದರ್ಭಿಕ ಚಿತ್ರ

ಜೈಪುರ: ಪಾಕಿಸ್ತಾನದ ಮೇಲಿನ ವಾಯು ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಅತಿ ಉದ್ದ ಗಡಿ ಹಂಚಿಕೊಂಡಿರುವ ರಾಜಸ್ಥಾನದಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜಸ್ಥಾನದ ಗಡಿ ಪಟ್ಟಣಗಳಾದ ಖಾಜುವಾಲಾ ಹಾಗೂ ಅನೂಪ್‌ಗಢದಿಂದ ಸರಿಸುಮಾರು 100 ಕಿ.ಮೀ. ದೂರದಲ್ಲಿರುವ ಬಹಾವಾಲ್ಪುರದಲ್ಲಿರುವ ಜೈಸೆ ಮುಹಮ್ಮದ್‌ ನ ಅಡಗುದಾಣವನ್ನು ಗುರಿಯಾಗಿರಿಸಿ ಭಾರತೀಯ ವಾಯು ಪಡೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ರಾಜಸ್ಥಾನದ ಗಡಿ ಜಿಲ್ಲೆಗಳಾದ ಬಿಕೇನರ್, ಜೈಸಲ್ಮೇರ್, ಬರ್ಮರ್ ಹಾಗೂ ಶ್ರೀಗಂಗಾನಗರಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಬಿಕೇನರ್ ಹಾಗೂ ಜೋಧಪುರದಲ್ಲಿ ವಿಮಾನ ನಿಲ್ದಾಣಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ. ಜೈಪುರ ವಿಮಾನ ನಿಲ್ದಾಣದಿಂದ ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಬುಧವಾರ ಮುಂಜಾನೆ ಸುಮಾರು 2 ಗಂಟೆಗೆ ಯುದ್ಧ ವಿಮಾನಗಳು ಆಕಾಶದಲ್ಲಿ ಸಂಚರಿಸುವ ಸದ್ದು ಕೇಳಿ ಬಂದಿದೆ ಎಂದು ಜೈಸಲ್ಮಾರ್ ಹಾಗೂ ಬರ್ಮರ್‌ನ ನಿವಾಸಿಗಳು ವರದಿ ಮಾಡಿದ್ದರು. ಆರಂಭದಲ್ಲಿ ಇದು ದೈನಂದಿನ ಅಭ್ಯಾಸ ಎಂದು ಗ್ರಹಿಸಲಾಗಿತ್ತು. ಬಳಿಕ ಇದು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುದಾಣಗಳನ್ನು ಗುರಿಯಾಗಿರಿಸಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಎಂದು ದೃಢಪಟ್ಟಿತು.

ಬಿಕೇನರ್ ಹಾಗೂ ಶ್ರೀಗಂಗಾನಗರ್‌ನಲ್ಲಿ ಎಲ್ಲಾ ಸರಕಾರಿ ಉದ್ಯೋಗಿಗಳ ರಜೆಯನ್ನು ರದ್ದುಗೊಳಿಸಲಾಗಿದೆ ಹಾಗೂ ಅವರು ತಮ್ಮ ಕೇಂದ್ರ ಕಚೇರಿಯಿಂದ ಹೊರಗೆ ಹೋಗದಂತೆ ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News