ಕಲಾಪದ ಚಿತ್ರೀಕರಣ ನಡೆಸಿದ ಆರೋಪ: ಕಾಂಗ್ರೆಸ್ ರಾಜ್ಯಸಭಾ ಸದಸ್ಯೆಯ ಅಮಾನತು ಆದೇಶ ವಾಪಸ್
ರಜನಿ ಅಶೋಕ್ ರಾವ್ ಪಾಟೀಲ್ (ANI)
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆ ರಜನಿ ಅಶೋಕ್ ರಾವ್ ಪಾಟೀಲ್ ವಿರುದ್ಧ ಹೇರಲಾಗಿದ್ದ ಅಮಾನತು ಆದೇಶವನ್ನು ಸೋಮವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಹಿಂಪಡೆಯಲಾಯಿತು.
ಇದಕ್ಕೂ ಮುನ್ನ, ಫೆಬ್ರವರಿ 10ರಂದು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭಾ ನಿಯಮಾವಳಿಗಳಿಗೆ ವಿರುದ್ಧವಾಗಿ ಸದನದ ಕಲಾಪಗಳನ್ನು ಚಿತ್ರೀಕರಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದಲ್ಲಿ ಪಾಟೀಲ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಹಕ್ಕು ಸಮಿತಿಯ 74ನೇ ವರದಿಯನ್ನು ಮಂಡಿಸಿದ ಬಿಜೆಪಿ ಸಂಸದ ಸರೋಜ್ ಪಾಂಡೆ, ಹಕ್ಕುಚ್ಯುತಿ ಮಾಡಿರುವುದರಿಂದ ಪಾಟೀಲ್ ಅವರನ್ನು ದೋಷಿ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡಿದರು. ಅಲ್ಲದೆ ಸಮಿತಿಯು ಪಾಟೀಲ್ ಅವರನ್ನು ಇಲ್ಲಿಯವರೆಗೆ ಅಮಾನತುಗೊಳಿಸಿರುವುದು ಸಾಕಷ್ಟಾಗಿದ್ದು, ಈ ಅಮಾನತನ್ನು ಸೋಮವಾರ(ಆಗಸ್ಟ್ 7)ದಿಂದ ವಾಪಸು ಪಡೆಯಬೇಕು ಎಂದೂ ಶಿಫಾರಸು ಮಾಡಿದೆ ಎಂದೂ ಅವರು ಹೇಳಿದ್ದಾರೆ.
ನಂತರ ಅಮಾನತನ್ನು ಹಿಂಪಡೆಯುವ ನಿರ್ಣಯವನ್ನು ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಮಂಡಿಸಿದರು. ಈ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.