ರಾಮ ಮಂದಿರ ಟ್ರಸ್ಟ್‌ಗೆ ದೇವಾಲಯದ ಭೂಮಿ ಮಾರಾಟ ; ಮಾಜಿ ಅರ್ಚಕನ ವಿರುದ್ಧ ಪ್ರಕರಣ ದಾಖಲು
ಅಯೋಧ್ಯೆ ದೇವಾಲಯ | PTI
ಅಯೋಧ್ಯೆ: ದೇವಾಲಯದ ಭೂಮಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪದಲ್ಲಿ ಅಯೋಧ್ಯೆ ದೇವಾಲಯದ ಮಾಜಿ ಅರ್ಚಕನ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ವಹಿಸುತ್ತಿದೆ.
ರಾಮಜನ್ಮಭೂಮಿ ದೇವಾಲಯ ಸಂಕೀರ್ಣದ ಸಮೀಪದ ಆನಂದ ಭವನ ದೇವಾಲಯದ 21,198.8 ಚದರ ಅಡಿ ಭೂಮಿಯನ್ನು ಆರೋಪಿ ರಮಾ ಕಾಂತ್ ಪಾಠಕ್ 6 ಕೋ.ರೂ.ಗೆ 2024 ಸೆಪ್ಟಂಬರ್ 21ರಂದು ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ ಎಂದು ಫೈಝಾಬಾದ್‌ನ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ದೂರಿನಲ್ಲಿ ಆರೋಪಿಸಲಾಗಿದೆ.
ಮಾರಾಟ ಕರಾರು ಪತ್ರ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು ಅದು ಹೇಳಿದೆ.
ಆನಂದ ಭವನ ದೇವಾಲಯ ಸಮಿತಿ ಉಪ ನೋಂದಣಿ ಕಚೇರಿಯಲ್ಲಿ ಈ ಭೂಮಿಯನ್ನು ನೋಂದಣಿ ಮಾಡಿಕೊಂಡಿತ್ತು. ದೇವಾಲಯದ ಸೊತ್ತನ್ನು ವರ್ಗಾವಣೆ ಮಾಡಲು ಅಥವಾ ಮಾರಾಟ ಮಾಡಲು ಯಾವುದೇ ವ್ಯಕ್ತಿಗೆ ಅಧಿಕಾರ ಇಲ್ಲ ಎಂದು ಉಲ್ಲೇಖಿಸಲಾಗಿದೆ ದೂರಿನಲ್ಲಿ ಹೇಳಲಾಗಿದೆ.
ರಮಾಕಾಂತ್ ಪಾಠಕ್ ಅವರ ವರ್ತನೆಗಳು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ 2016ರಲ್ಲಿ ಅರ್ಚಕನ ಕರ್ತವ್ಯದಿಂದ ವಜಾಗೊಳಿಸಲಾಗಿತ್ತು ಎಂದು ಕೂಡ ದೂರು ಬಹಿರಂಗಗೊಳಿಸಿದೆ.
ಟ್ರಸ್ಟ್‌ಗೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಕೆಲವು ತಿಂಗಳುಗಳ ಬಳಿಕ ಈ ವಿಷಯ ಸಮಿತಿಗೆ ತಿಳಿದಾಗ ಅದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಪ್ರಯತ್ನಿಸಿದೆ. ಆದರೆ, ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅನಂತರ ದೇವಾಲಯ ನಿರ್ವಹಣಾ ಸಮಿತಿ ಸದಸ್ಯ ಆನಂದ ಪ್ರಕಾಶ್ ಪಾಠಖ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದರು.
ಈಗ ಪ್ರಕರಣ ದಾಖಲಾಗಿದ್ದು, ಈ ಕುರಿತಂತೆ ತನಿಖೆ ನಡೆಯುತ್ತಿದೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಸ್‌ಎಚ್‌ಒ ಅಶ್ವಿನಿ ಪಾಂಡೆ ತಿಳಿಸಿದ್ದಾರೆ.