ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆ ಬಿರುಸು
Photo : PTI
ನಾಗರಕರ್ನೂಲ್: ಶನಿವಾರ(ಫೆ. 22)ದಂದು ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದ ಪಾರ್ಶ್ವವೊಂದು ಕುಸಿದು ಬಿದ್ದ ಪರಿಣಾಮ, ಸುರಂಗದೊಳಗೆ ಸಿಲುಕಿಕೊಂಡಿರುವ ಎಂಟು ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಬಿರುಸುಗೊಂಡಿದೆ. ರಕ್ಷಣಾ ತಂಡಗಳು ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನು ತಲುಪಲು ಅಡ್ಡಿಯಾಗಿರುವ ಅವಶೇಷಗಳ ತೆರವಿಗೆ ಚಾಲನೆ ನೀಡಲಾಗಿದ್ದು, ಗ್ಯಾಸ್ ಕಟರ್ ಗಳನ್ನು ಬಳಸಿ ಸುರಂಗ ಕೊರೆಯುವ ಯಂತ್ರದ ಒಂದು ಭಾಗವನ್ನು ತುಂಡರಿಸಲು ಪ್ರಾರಂಭಿಸಿವೆ.
ಸುರಂಗದೊಳಗಿನಿಂದ ಅವಶೇಷಗಳನ್ನು ಹೊರ ಸಾಗಿಸಲು ನೆರವು ನೀಡುವ ಹಾನಿಗೊಳಗಾಗಿರುವ ಕನ್ವೇಯರ್ ಬೆಲ್ಟ್ ಇಂದು ಬೆಳಗ್ಗೆಯೊಳಗೆ ರಿಪೇರಿಯಾಗುವ ನಿರೀಕ್ಷೆ ಇದೆ ಎಂದು ನಾಗರಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ತಿಳಿಸಿದ್ದಾರೆ.
“ಗ್ಯಾಸ್ ಕಟಿಂಗ್ ಯಂತ್ರಗಳು ಈಗಾಗಲೇ ಸುರಂಗದೊಳಗೆ ಹೋಗಿವೆ. ರಾತ್ರಿ ಕೂಡಾ ಅವರು ಸ್ವಲ್ಪ ತುಂಡರಿಸುವ ಕೆಲಸ ಮಾಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅವರು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ತೆಲಂಗಾಣ ಸಚಿವ ಉತ್ತಮ್ ಕುಮಾರ್ ರೆಡ್ಡಿ, ಸುರಂಗದೊಳಗೆ ಸಿಲುಕಿಕೊಂಡಿರುವ ಸುರಂಗ ಕೊರೆಯುವ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡುಗಳನ್ನಾಗಿ ಮಾಡಿ, ಹೊರ ತೆಗೆಯಲಾಗುವುದು. ಇದಾದ ನಂತರ, ನಾಪತ್ತೆಯಾಗಿರುವ ಎಂಟು ಮಂದಿ ಕಾರ್ಮಿಕರನ್ನು ಪತ್ತೆ ಹಚ್ಚಲು ಸೇನೆ, ನೌಕಾಪಡೆ, ರ‍್ಯಾಟ್ ಮೈನರ್ಸ್ ಹಾಗೂ NDRF ತಂಡಗಳು ತಮ್ಮ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಮತ್ತೊಮ್ಮೆ ಗಂಭೀರ ಪ್ರಯತ್ನ ನಡೆಸಲಿವೆ” ಎಂದು ತಿಳಿಸಿದ್ದಾರೆ.