×
Ad

4 ರಾಜ್ಯಗಳ 5 ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟ

Update: 2025-06-23 20:35 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶವನ್ನು ಭಾರತೀಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷ (ಆಪ್)ವು ಎರಡು ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್, ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ತಲಾ ಒಂದು ಸ್ಥಾನವನ್ನು ಜಯಿಸಿವೆ.

ಈ ವರ್ಷದ ಆದಿ ಭಾಗದಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ, ನೇಪಥ್ಯಕ್ಕೆ ಸರಿದಿದ್ದ ಆಮ್ ಆದ್ಮಿ ಪಕ್ಷವು, ಉಪ ಚುನಾವಣೆಯಲ್ಲಿ ಗುಜರಾತ್ ಮತ್ತು ಪಂಜಾಬ್ನಲ್ಲಿ ತಲಾ ಒಂದು ಸ್ಥಾನ ಗೆದ್ದಿದೆ.

ಜೂನ್ 19ರಂದು ಉಪಚುನಾವಣೆ ನಡೆದಿತ್ತು.

►ಗುಜರಾತ್

ಗುಜರಾತ್ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ತಲಾ ಒಂದು ಸ್ಥಾನವನ್ನು ಗೆದ್ದಿವೆ.

ವಿಸವದರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯ 17,554 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಕಿರೀತ್ ಪಟೇಲ್ರನ್ನು ಸೋಲಿಸಿದರು.

ಗೋಪಾಲ್ ಇಟಾಲಿಯ 75,942 ಮತಗಳನ್ನು ಪಡೆದರೆ, ಕಿರೀತ್ ಪಟೇಲ್ 58,388 ಮತಗಳನ್ನು ಗಳಿಸಿದರು. ಕಾಂಗ್ರೆಸ್ ಪಕ್ಷದ ನಿತಿನ್ ರನ್ಪರಿಯ 5,501 ಮತಳನ್ನು ಪಡೆದು ತೃತೀಯ ಸ್ಥಾನಿಯಾದರು.

ಆಪ್ ಶಾಸಕ ಭೂಪೇಂದ್ರ ಭಯಾನಿ 2023 ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಈ ಸ್ಥಾನ ತೆರವಾಗಿತ್ತು.

ಗುಜರಾತ್ನ ಕಡಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ರಾಜೇಂದ್ರ ಚಾವ್ಡ ಪಕ್ಷದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಅವರು ಕಾಂಗ್ರೆಸ್ನ ರಮೇಶ್ ಚಾವ್ಡರನ್ನು 39,452 ಮತಗಳ ಅಂತರದಿಂದ ಮಣಿಸಿದರು. ರಾಜೇಂದ್ರ ಚಾವ್ಡ 99,742 ಮತಗಳನ್ನು ಪಡೆದರೆ, ಅವರ ಎದುರಾಳಿ ರಮೇಶ್ ಚಾವ್ಡ 60,290 ಮತಗಳನ್ನು ಗಳಿಸಿದರು. ಆಮ್ ಆದ್ಮಿ ಪಾರ್ಟಿಯ ಚಾವ್ಡ ಜಗದೀಶ್ ಭಾಯಿತೆ 3090 ಮತಗಳು ಬಿದ್ದವು.

ಹಾಲಿ ಬಿಜೆಪಿ ಶಾಸಕ ಕರ್ಸನ್ಭಾಯಿ ಪೂಂಜಾಭಾಯಿ ಸೋಳಂಕಿ ಫೆಬ್ರವರಿ ತಿಂಗಳಲ್ಲಿ ನಿಧನರಾದ ಬಳಿಕ ಈ ಕ್ಷೇತ್ರ ತೆರವಾಗಿತ್ತು.

►ಕೇರಳ

ಕೇರಳದ ನೀಲಂಬುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ. ಕಾಂಗ್ರೆಸ್ ಅಭ್ಯರ್ಥಿ ಆರ್ಯದಾನ್ ಶೌಕತ್ 11,077 ಮತಗಳ ಅಂತರದಿಂದ ತನ್ನ ಎದುರಾಳಿ ಸಿಪಿಎಮ್ ಅಭ್ಯರ್ಥಿ ಎಮ್. ಸ್ವರಾಜ್ರನ್ನು ಸೋಲಿಸಿದರು.

ಆರ್ಯದಾನ್ ಶೌಕತ್ 77,737 ಮತಗಳನ್ನು ಪಡೆದರೆ, ಅವರ ಸಮೀಪದ ಎದುರಾಳಿ ಸಿಪಿಎಮ್ ಅಭ್ಯರ್ಥಿ 66,660 ಮತಗಳನ್ನು ಗೆದ್ದರು.

ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಾಗೂ ಎರಡು ಬಾರಿಯ ಶಾಸಕ ಪಿ.ವಿ. ಅನ್ವರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗಿತ್ತು.

ಈಗ ತೃಣಮೂಲ ಕಾಂಗ್ರೆಸ್ನ ರಾಜ್ಯ ಸಂಚಾಲಕರಾಗಿರುವ ಅನ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪ್ರಬಲ ಸ್ಪರ್ಧೆ ನೀಡಿದ್ದಾರೆ. ಅವರು 19,760 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ಮೋಹನ್ ಜಾರ್ಜ್ 8,648 ಮತಗಳನ್ನು ಪಡೆದರು.

►ಪಂಜಾಬ್

ಪಂಜಾಬ್ನ ಲುದಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಅವರು ತನ್ನ ಸಮೀಪದ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಭರತ್ ಭೂಷಣ್ ಆಶು ಅವರನ್ನು 10,637 ಮತಗಳ ಅಂತರದಿಂದ ಹಿಮ್ಮೆಟ್ಟಿಸಿದರು.

ಸಂಜೀವ್ ಅರೋರ 35,179 ಮತಗಳನ್ನು ಗಳಿಸಿದರೆ, ಭರತ್ ಭೂಷಣ್ 24,542 ಮತಗಳನ್ನು ಪಡೆದರು. ಮೂರನೇ ಸ್ಥಾನದಲ್ಲಿರುವ ಬಿಜೆಪಿಯ ಜೀವನ್ ಗುಪ್ತಾ 20,323 ಮತಗಳನ್ನು ಪಡೆದರು.

►ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಕಾಲಿಗಂಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ನ ಅಲಿಫಾ ಅಹ್ಮದ್ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಆಶಿಶ್ ಘೋಷ್ರನ್ನು 50,049 ಮತಗಳ ಭರ್ಜರಿ ಅಂತರದಿಂದ ಸೋಲಿಸಿದ್ದಾರೆ.

ವಿಜೇತ ಅಭ್ಯರ್ಥಿ 1,02,759 ಮತಗಳನ್ನು ಪಡೆದರೆ, ಪರಾಜಿತ ಬಿಜೆಪಿ ಅಭ್ಯರ್ಥಿ 52,710 ಮತಗಳನ್ನು ಗಳಿಸಿದರು. ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕಬೀಲುದ್ದೀನ್ ಶೇಖ್ 28,348 ಮತಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News