×
Ad

ಮತದಾನದ ಹಕ್ಕು ಮತದಾನದ ಸ್ವಾತಂತ್ರ್ಯಕ್ಕಿಂತ ಭಿನ್ನವಾಗಿದೆ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಹೇಳಿಕೆ

Update: 2025-11-06 16:42 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಚುನಾವಣೆಯಲ್ಲಿ ಮತದಾನದ ಹಕ್ಕು ಮತದಾನದ ಸ್ವಾತಂತ್ರ್ಯಕ್ಕಿಂತ ಭಿನ್ನವಾಗಿದೆ, ಮೊದಲನೆಯದು ಕೇವಲ ಶಾಸನಬದ್ಧ ಹಕ್ಕು ಆಗಿದ್ದರೆ ಎರಡನೆಯದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕು ಆಗಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ.

ಅವಿರೋಧ ಚುನಾವಣೆಗಳಿಗೆ ಅನ್ವಯವಾಗುವ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 53(2) ಮತ್ತು 1961ರ ಚುನಾವಣಾ ನಿಯಮಾವಳಿಯ 21 ಮತ್ತು 21ಬಿ ನಮೂನೆಗಳೊಂದಿಗೆ ಓದಲಾಗುವ ನಿಯಮ 11 ಸಂವಿಧಾನದ ವಿಧಿ(1)(ಎ) ಅಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರವಾಗಿ ಕೇಂದ್ರವು ಈ ಅಫಿಡವಿಟ್ ಸಲ್ಲಿಸಿದೆ.

ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿ ಒಬ್ಬನೇ ಅಭ್ಯರ್ಥಿಯಿದ್ದಾಗ ಕಲಂ 53(2) ಅನ್ವಯವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ನಮೂನೆ 21 ಅಥವಾ ನಮೂನೆ 21ಬಿ ಅನ್ನು ಭರ್ತಿ ಮಾಡುವ ಮೂಲಕ ಅವಿರೋಧ ಆಯ್ಕೆಯನ್ನು ಘೋಷಿಸುವಂತೆ ಈ ಕಲಂ ಚುನಾವಣಾಧಿಕಾರಿಗೆ ಸೂಚಿಸುತ್ತದೆ.

ಚುನಾವಣಾಧಿಕಾರಿಯು ಚುನಾವಣೆಯನ್ನು ನಡೆಸದೆ ಅವಿರೋಧ ಆಯ್ಕೆಯನ್ನು ಘೋಷಿಸುವುದು ಮತದಾರರು ‘ನೋಟಾ’ ಆಯ್ಕೆಯ ಪರವಾಗಿ ಮತ ಚಲಾಯಿಸುವ ಹಕ್ಕನ್ನು ಮತ್ತು ಕಣದಲ್ಲಿರುವ ಅಭ್ಯರ್ಥಿಯ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದನ್ನು ತಡೆಯುತ್ತದೆ ಎಂದು ಅರ್ಜಿದಾರರಾದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರತಿಪಾದಿಸಿವೆ.

ಅರ್ಜಿಯನ್ನು ವಿಚಾರಣೆಗಾಗಿ ಗುರುವಾರ(ನ.6) ನ್ಯಾ.ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ಆದರೆ ಪೀಠವು ಇಂದು ಸೇರಲಿಲ್ಲ.

ಕೇಂದ್ರದ ಜೊತೆಗೆ ಚುನಾವಣಾ ಆಯೋಗವೂ ಸವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News