ಉತ್ತರಾಖಂಡ | ಭೂಕುಸಿತ, ಮಳೆಯಿಂದ ಪಾರಾಗಲು ಹೆಲಿಕಾಪ್ಟರ್ ಮೂಲಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!
ಡೆಹ್ರಾಡೂನ್,ಸೆ.7: ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆ,ಭೂಕುಸಿತಗಳು ಮತ್ತು ಪ್ರತಿಕೂಲ ಹವಾಮಾನ ಭಾರೀ ಹಾವಳಿಯನ್ನೆಬ್ಬಿಸಿದ್ದ,ಮೇಘಸ್ಫೋಟಗಳು ಮತ್ತು ತುಂಬಿ ಹರಿಯುತ್ತಿರುವ ನದಿಗಳು ಉತ್ತರಾಖಂಡದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಆದರೂ ರಾಜಸ್ಥಾನದ ನಾಲ್ವರು ವಿದ್ಯಾರ್ಥಿಗಳು ಎಲ್ಲ ಅಡೆತಡೆಗಳನ್ನು ಎದುರಿಸಿ ಪರೀಕ್ಷೆ ಬರೆಯಲು ಬಾಡಿಗೆ ಹೆಲಿಕಾಪ್ಟರ್ ಮೂಲಕ ಉತ್ತರಾಖಂಡವನ್ನು ತಲುಪಿದ್ದಾರೆ.
ಬಿ.ಎಡ್.ಓದುತ್ತಿರುವ ಈ ವಿದ್ಯಾರ್ಥಿಗಳು ಮುನ್ಸಿಯಾರಿಯಲ್ಲಿನ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಬೇಕಿತ್ತು,ಆದರೆ ಭೂಕುಸಿತಗಳು ಮತ್ತು ಭಾರೀ ಮಳೆಯಿಂದಾಗಿ ಅಲ್ಲಿಗೆ ತಲುಪುವ ಎಲ್ಲ ಮಾರ್ಗಗಳು ಬಂದ್ ಆಗಿದ್ದವು.
ಉತ್ತರಾಖಂಡ ಮುಕ್ತ ವಿವಿಯ ಈ ವಿದ್ಯಾರ್ಥಿಗಳು ಮುನ್ಸಿಯಾರಿಯ ಆರ್ಎಸ್ ಟೋಲಿಯಾ ಪಿಜಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಹೀಗಾಗಿ ರಾಜಸ್ಥಾನದ ಬಾಲೋತರಾ ಪಟ್ಟಣದ ನಿವಾಸಿಗಳಾದ ನಾಲ್ವರೂ ವಿದ್ಯಾರ್ಥಿಗಳು ಆ.31ರಂದು ಹಲ್ದ್ವಾನಿ ತಲುಪಿದ್ದರು. ಆಗಲೇ ಮುನ್ಸಿಯಾರಿಗೆ ತೆರಳುವ ಎಲ್ಲ ರಸ್ತೆಗಳು ಭೂಕುಸಿತಗಳಿಂದಾಗಿ ಬಂದ್ ಆಗಿರುವ ವಿಷಯ ಅವರಿಗೆ ಗೊತ್ತಾಗಿತ್ತು.
ಹಲ್ದ್ವಾನಿ ಮತ್ತು ಮುನ್ಸಿಯಾರಿ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವ ಕಂಪೆನಿಯೊಂದರ ಬಗ್ಗೆ ಅವರಿಗೆ ಮಾಹಿತಿ ಲಭಿಸಿದಾಗ ಬೇರೆ ಆಯ್ಕೆಯಿಲ್ಲದೆ ಹೆಲಿಕಾಪ್ಟರ್ ಬಾಡಿಗೆಗೆ ಪಡೆದುಕೊಂಡಿದ್ದರು. ಪರೀಕ್ಷೆ ಬರೆದ ಬಳಿಕ ಅದೇ ಹೆಲಿಕಾಪ್ಟರ್ನಲ್ಲಿ ಹಲ್ದ್ವಾನಿಗೆ ವಾಪಸಾಗಿದ್ದರು.
ಇದಕ್ಕಾಗಿ ಪ್ರತಿಯೊಬ್ಬರೂ ಏಕಮುಖ ಪ್ರಯಾಣಕ್ಕೆ 5,200 ರೂ.ಗಳ ಶುಲ್ಕವನ್ನು ಪಾವತಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉತ್ತರಾಖಂಡ ಮುಕ್ತ ವಿವಿಯ ಬಿ.ಎಡ್.ಪರೀಕ್ಷಾ ಉಸ್ತುವಾರಿ ಸೋಮೇಶ್ ಕುಮಾರ್, ಅವರು ಪರೀಕ್ಷಾ ಕೇಂದ್ರವನ್ನು ಅಭ್ಯರ್ಥಿಗಳೇ ಆಯ್ಕೆ ಮಾಡಿಕೊಂಡಿದ್ದರು ಎಂದು ತಿಳಿಸಿದರು.