30 ಕೋಟಿ ರೂ. ವ್ಯಾವಹಾರಿಕ ಲಾಭ ವಂಚನೆ: ಅಮೆರಿಕದಿಂದ ಗಡಿಪಾರಿಗೊಳಗಾಗಿದ್ದ ವ್ಯಕ್ತಿ ದಿಲ್ಲಿಯಲ್ಲಿ ಬಂಧನ
PC: x.com/IndianExpress
ಹೊಸದಿಲ್ಲಿ: ವಿದೇಶಿ ವ್ಯವಹಾರ ನೀತಿಯಡಿ ವ್ಯಾವಹಾರಿಕ ಲಾಭಗಳನ್ನು ಒಳಗೊಂಡಿದ್ದ ಪ್ರಮುಖ ವಂಚನೆ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ ವ್ಯಕ್ತಿಯೊಬ್ಬನನ್ನು ಬಂಧಿಸಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಂಗದ್ ಸಿಂಗ್ ಚಾಂಧೋಕ್ ಎಂದೂ ಕರೆಯಲಾಗುವ ಅಂಗದ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಹಾಗೂ ಈತನ ಸಹಚರರು ರಫ್ತು ಭತ್ಯೆಗಳನ್ನು ಪಡೆಯಲು ಫೋರ್ಜರಿ ದಾಖಲೆಗಳನ್ನು ಸಲ್ಲಿಸುವ ಮೂಲಕ, ಸರಕಾರಕ್ಕೆ 30.47 ಕೋಟಿ ರೂ. ಮೊತ್ತದ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಐಸಿಐಸಿಐ ಬ್ಯಾಂಕ್ ನೀಡಿದ್ದ ದೂರನ್ನು ಆಧರಿಸಿ, ಜನವರಿ 11, 2017ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 420, 467, 468, 471 ಹಾಗೂ 120ಬಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ದೂರಿನನ್ವಯ, 17 ಸಂಸ್ಥೆಗಳನ್ನು ಪ್ರತಿನಿಧಿಸುವ 18 ಮಂದಿ ಬ್ಯಾಂಕ್ ಖಾತೆದಾರರು ತಮ್ಮ ರಫ್ತು ದಾಖಲೆಗಳನ್ನು ವಿಲೇವಾರಿ ಮಾಡಿಕೊಳ್ಳಲು ನರೈನಾದಲ್ಲಿನ ಐಸಿಐಸಿಐ ಶಾಖೆಗೆ 467 ನಕಲಿ ವಿದೇಶಿ ಸ್ವೀಕೃತಿ ರವಾನೆ ಪ್ರಮಾಣ ಪತ್ರಗಳನ್ನು (Foreign inward remittance certificates) ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಫೋರ್ಜರಿ ವಿದೇಶಿ ಸ್ವೀಕೃತಿ ರವಾನೆ ಪ್ರಮಾಣ ಪತ್ರಗಳನ್ನು ಸೆಪ್ಟೆಂಬರ್ 26, 2013ರಿಂದ ಅಕ್ಟೋಬರ್ 21, 2015ರ ನಡುವೆ ಭೈಕಾಜಿ ಕಾಮಾ ಪ್ಲೇಸ್ ನಲ್ಲಿನ ಕಾರ್ಪೊರೇಷನ್ ಬ್ಯಾಂಕ್ ವಿತರಿಸಿತ್ತು ಎನ್ನಲಾಗಿದೆ. ಈ ದಾಖಲೆಗಳನ್ನು ಆಧರಿಸಿ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ನಗದೀಕರಣ ಪ್ರಮಾಣ ಪತ್ರಗಳನ್ನು (Bank realization certificates) ವಿತರಿಸಿತ್ತು. ಇದರ ಬೆನ್ನಿಗೇ, ವ್ಯಾವಹಾರಿಕ ಲಾಭ ಪಡೆಯಲು ಈ ಪ್ರಮಾಣ ಪತ್ರಗಳನ್ನು ವಿದೇಶಿ ವ್ಯವಹಾರಗಳ ಪ್ರಧಾನ ನಿರ್ದೇಶಕರಿಗೆ ಸಲ್ಲಿಸಲಾಗಿತ್ತು.
“ಈ ಪ್ರಕರಣದ ತನಿಖೆಯ ವೇಳೆ, ವಿದೇಶಿ ವ್ಯವಹಾರ ನೀತಿಯನ್ವಯ, ರಫ್ತುದಾರರಿಗೆ ಸುಂಕ ಹಿಂಪಡೆತ ಮತ್ತು ಪ್ರಮಾಣ ಪತ್ರದಂತಹ ಎರಡು ಲಾಭಗಳನ್ನು ನೀಡಲಾಗುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರನ್ವಯ, ಭಾರತದಿಂದ ಹೊರಗೆ ರಫ್ತಾಗುವ ಸರಕುಗಳು ಸುಂಕ ಡಿಪೊ ಅಥವಾ ಬಂದರಿನ ಮೂಲಕ ಹಾದು ಹೋಗಬೇಕಿದ್ದು, ಒಮ್ಮೆ ಈ ಸರಕು ರಫ್ತಾಗುತ್ತಿದ್ದಂತೆಯೆ, ಸುಂಕ ಇಲಾಖೆಯಿಂದ ನೇರವಾಗಿ ರಫ್ತುದಾರರ ಖಾತೆಗೇ ಸುಂಕ ಹಿಂಪಡೆತವನ್ನು ಜಮೆ ಮಾಡಲಾಗುತ್ತದೆ. ಎರಡನೆ ವಿಧಾನದಲ್ಲಿ, ವಿದೇಶಿ ವ್ಯವಹಾರಗಳ ಪ್ರಧಾನ ನಿರ್ದೇಶಕರ ಕಚೇರಿ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದು, ಈ ಪ್ರಮಾಣ ಪತ್ರಗಳನ್ನು ಆಹಾರ ವಸ್ತುಗಳ ಆಮದು ವೇಳೆ ಸುಂಕ ವಿನಾಯಿತಿಗಾಗಿ ಬಳಸಿಕೊಳ್ಳಬಹುದಾಗಿದೆ. ಸುಂಕ ನಗದೀಕರಣ ಪ್ರಮಾಣ ಪತ್ರಗಳನ್ನು ರಫ್ತುದಾರರಿಗೆ ನೀಡಲಾಗುವ ಭತ್ಯೆಯ ಲಾಭದಂತೆ ಬಳಸಲಾಗುತ್ತದೆ” ಎಂದು ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ಘಟಕದ ಉಪ ಪೊಲೀಸ್ ಆಯುಕ್ತ ವಿಕ್ರಂ ಪೊರ್ವಾಲ್ ತಿಳಿಸಿದ್ದಾರೆ.
“ಇಂತಹ ರಫ್ತಿಗೆ ಪ್ರತಿಯಾಗಿ, ರಫ್ತುದಾರರ ಖಾತೆಗಳಿಗೆ ಪಾವತಿ ಜಮೆಯಾದ ನಂತರ, ಈ ಪರವಾನಗಿ ಅಥವಾ ಪ್ರಮಾಣ ಪತ್ರಗಳನ್ನು ವಿತರಿಸಬೇಕಾಗುತ್ತದೆ. ತಮ್ಮ ರಫ್ತಿಗೆ ಪ್ರತಿಯಾಗಿ ಪಾವತಿಯನ್ನು ಸ್ವೀಕರಿಸಿದ ನಂತರ, ಅಂತಹ ಸಂಸ್ಥೆಗಳ ವ್ಯಾಪಾರಿಗಳು/ಮಾಲಕರು ಅಧಿಕೃತ ವ್ಯಾವಹಾರಿಕ ಬ್ಯಾಂಕ್ ಗೆ ತಮ್ಮ ರಫ್ತು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ, ಬ್ಯಾಂಕ್ ಗಳು ರಫ್ತುದಾರರಿಗೆ ಬ್ಯಾಂಕ್ ನಗದೀಕರಣ ಪ್ರಮಾಣ ಪತ್ರಗಳನ್ನು ವಿತರಿಸುತ್ತವೆ. ಇದಾದ ನಂತರ, ರಫ್ತುದಾರರು ವಿದೇಶಿ ವ್ಯವಹಾರಗಳ ಪ್ರಧಾನ ನಿರ್ದೇಶಕರಿಗೆ ಈ ಪ್ರಮಾಣ ಪತ್ರಗಳನ್ನು ಸಲ್ಲಿಸಿ, ಸುಂಕ ವಿನಾಯಿತಿಯ ಲಾಭವನ್ನು ಪಡೆಯಬೇಕಾಗುತ್ತದೆ. ಈ ದಾಖಲೆಗಳನ್ನು ಪರೀಕ್ಷಿಸಿದ ನಂತರ, ವಿದೇಶಿ ವ್ಯವಹಾರಗಳ ಪ್ರಧಾನ ನಿರ್ದೇಶಕರು ಪರವಾನಗಿಗಳು/ಪ್ರಮಾಣ ಪತ್ರಗಳನ್ನು ವಿತರಿಸುತ್ತಾರೆ. ಈ ಭತ್ಯೆಗಳನ್ನು ಆಮದು ಸುಂಕ ಜಮೆಯ ರೂಪದಲ್ಲಿ ನೀಡಲಾಗುತ್ತದೆಯೆ ಹೊರತು, ನೇರ ನಗದು ಜಮೆಯ ರೂಪದಲ್ಲಲ್ಲ. ಈ ಜಮೆಗಳನ್ನು ಪ್ರಾಥಮಿಕ ಸುಂಕ ಮತ್ತು ಉಪ ಸುಂಕ ಪಾವತಿಗಾಗಿ ಬಳಸಿಕೊಳ್ಳಬಹುದಾಗಿದ್ದು, ಈ ಪ್ರಮಾಣ ಪತ್ರಗಳನ್ನು ವರ್ಗಾಯಿಸಬಹುದಾಗಿದೆ” ಎಂದೂ ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಅಂಗದ್ ಪಾಲ್ ಸಿಂಗ್ ತನ್ನ ತಂದೆ ಸುರೀಂದರ್ ಸಿಂಗ್ ಹಾಗೂ ಸಹೋದರ ಹರ್ ಸಾಹಿಬ್ ಸಿಂಗ್ ರೊಂದಿಗಿನ ಜಂಟಿ ಮಾಲಕತ್ವದಲ್ಲಿ ಕುಮಾರ್ ಟ್ರೇಡಿಂಗ್ ಕಂಪನಿ, ನ್ಯಾಷನಲ್ ಟ್ರೇಡರ್, ಟ್ರೈಡೆಂಟ್ ಓವರ್ ಸೀಸ್ ಇಂಡಿಯಾ, ಎಚ್ಎಸ್ಸಿ ಎಕ್ಸಿಮ್ ಇಂಡಿಯಾ ಹಾಗೂ ಎಎಚ್ಸಿ ಆಟೊ ಸ್ಪೇರ್ಸ್ ಎಂಬ ಐದು ಕಂಪನಿಗಳ ಮಾಲಕತ್ವ ಹೊಂದಿದ್ದಾನೆ. ಈ ವಂಚನೆಯನ್ನೆಸಗಲು ಆತ ಈ ಕಂಪನಿಗಳ ಕಾರ್ಯಾಚರಣೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದಕ್ಕಾಗಿ ಬ್ಯಾಂಕ್ ಉದ್ಯೋಗಿಗಳೂ ಸೇರಿದಂತೆ ಇತರರೊಂದಿಗೆ ಪಿತೂರಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ, ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಅಂಗದ್ ಪಾಲ್ ಸಿಂಗ್ ದೇಶದಿಂದ ಪರಾರಿಯಾಗಿದ್ದ. ಆದರೆ, ನಂತರ, ಆತ ಅಮೆರಿಕದಿಂದ ಗಡೀಪಾರಿಗೊಳಗಾಗುತ್ತಿದ್ದಂತೆಯೇ, ಪ್ರತ್ಯೇಕ ಪ್ರಕರಣವೊಂದರಲ್ಲಿ ಆತನನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು. ಇದೀಗ ಜೂನ್ 2ರಂದು ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿರುವ ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ಘಟಕ, ಆತನನ್ನು ತನ್ನ ವಶಕ್ಕೆ ಪಡೆದಿತ್ತು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಆರ್ಥಿಕ ಅಪರಾಧ ಘಟಕ ದಾಖಲಿಸಿಕೊಂಡಿದ್ದ ಮತ್ತೊಂದು ಪ್ರಕರಣದಲ್ಲೂ ಅಂಗದ್ ಪಾಲ್ ಸಿಂಗ್ ಆರೋಪಿಯಾಗಿದ್ದ. 12ನೇ ತರಗತಿಯವರೆಗೂ ವ್ಯಾಸಂಗ ಮಾಡಿರುವ ಆತ, ನಂತರ, ತನ್ನ ತಂದೆಯ ವಾಹನ ಬಿಡಿ ಭಾಗಗಳ ರಫ್ತು ವ್ಯಾಪಾರದಲ್ಲಿ ಸೇರ್ಪಡೆಯಾಗಿದ್ದ. ದಿನ ಕಳೆದಂತೆ, ಅಧಿಕ ಲಾಭದ ಭರವಸೆ ನೀಡಿ, ಆತ ತನ್ನ ಕುಟುಂಬದ ಇನ್ನಿತರ ಸಂಸ್ಥೆಗಳು ಹಾಗೂ ದೃಢೀಕೃತ ರಸೀದಿಗಳನ್ನು ಬಳಸಿಕೊಳ್ಳುವ ಮೂಲಕ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದ್ದ ಎಂದು ಆರೋಪಿಸಲಾಗಿದೆ.
ತನಿಖೆಯ ವೇಳೆ, ಸರಕಾರಿ ಲಾಭಗಳನ್ನು ಪಡೆಯಲು ಫೋರ್ಜರಿ ವಿದೇಶಿ ಸ್ವೀಕೃತಿ ರವಾನೆ ಪ್ರಮಾಣ ಪತ್ರಗಳನ್ನು ಬಳಸಲಾಗಿದ್ದರೂ, ಅವರ ಖಾತೆಗಳಿಗೆ ಯಾವುದೇ ನೈಜ ವಿದೇಶಿ ರವಾನೆ ಸ್ವೀಕೃತಿಯಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮೂವರು ಆರೋಪಿಗಳನ್ನೂ ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಗಳನ್ನೂ ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.
ಸೌಜನ್ಯ: indianexpress.com