ಆರ್‌ಎಸ್‌ಎಸ್ ಕಾರ್ಯಕರ್ತನ ಸಾವು, ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ತನಿಖೆ ಮಾಡಿ: ಮಾನವ ಹಕ್ಕುಗಳ ಆಯೋಗಕ್ಕೆ ಸಿಪಿಐ ಸಂಸದ ಪತ್ರ
ಸಾಂದರ್ಭಿಕ ಚಿತ್ರ | Photo Credi : indiatoday.in
ಹೊಸದಿಲ್ಲಿ, ಅ. 17: ಕೇರಳದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬನ ಸಾವು ಮತ್ತು ಸಂಘಟನೆಯಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐ ಸಂಸದ ಪಿ. ಸಂದೋಶ್ ಕುಮಾರ್ ಶುಕ್ರವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಅಧ್ಯಕ್ಷ ವಿ. ರಾಮಸುಬ್ರಮಣಿಯಮ್‌ರಿಗೆ ಪತ್ರ ಬರೆದಿದ್ದಾರೆ.
‘‘ಆರ್‌ಎಸ್‌ಎಸ್ ಕಾರ್ಯಕರ್ತ ಆನಂದು ಅಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರ ಸಾವಿಗೆ ಕಾರಣವಾಗಿರುವ ಸನ್ನಿವೇಶಗಳು ಮತ್ತು ಗಂಭೀರ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ಆಯೋಗದ ಉಸ್ತುವಾರಿಯಲ್ಲಿ ತಕ್ಷಣ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆಯಾಗಬೇಕಾಗಿದೆ’’ ಎಂದು ಎನ್‌ಎಚ್‌ಆರ್‌ಸಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ರಾಜ್ಯಸಭಾ ಸದಸ್ಯರು ಹೇಳಿದ್ದಾರೆ.
ಕೊಟ್ಟಾಯಮ್ ಜಿಲ್ಲೆಯ ತಂಪಲಕ್ಕಾಡ್ ನಿವಾಸಿಯಾಗಿರುವ ಸಾಫ್ಟ್‌ವೇರ್ ಇಂಜಿನಿಯರ್ ಅಜಿ ತಂಪನೂರ್‌ನ ಲಾಡ್ಜ್ ಒಂದರಲ್ಲಿ ಅಕ್ಟೋಬರ್ 9ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಒಂದು ದಿನದ ಬಳಿಕ, ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೂರ್ವ ನಿಗದಿತ ಸಂದೇಶವೊಂದು ಕಾಣಿಸಿಕೊಂಡಿತು. ನನ್ನ ಸಾವಿಗೆ ಆರ್‌ಎಸ್‌ಎಸ್ ಜವಾಬ್ದಾರಿ ಎಂಬುದಾಗಿ ಆ ಸಂದೇಶದಲ್ಲಿ ಅಜಿ ಆರೋಪಿಸಿದ್ದಾರೆ ಮತ್ತು ನನ್ನ ಕುಟುಂಬಕ್ಕೆ ನಿಕಟವಾಗಿದ್ದ ವ್ಯಕ್ತಿಯೋರ್ವ ನನ್ನ ಮೇಲೆ ಬಾಲ್ಯದಿಂದಲೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು ಎಂಬುದಾಗಿ ಆ ಸಂದೇಶದಲ್ಲಿ ಅಜಿ ಆರೋಪಿಸಿದ್ದಾರೆ.
ಅಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದನು ಮತ್ತು ಸಂಘಟನೆಯೊಂದಿಗೆ ಸುದೀರ್ಘ ಕಾಲದಿಂದ ನಂಟು ಹೊಂದಿದ್ದ ಕುಟುಂಬಕ್ಕೆ ಸೇರಿದ್ದನು.
‘‘ಆನಂದು ಅಜಿ ಅವರ ದುರಂತ ಸಾವು ಮತ್ತು ತನ್ನ ಅಂತಿಮ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಅವರು ಬಯಲು ಮಾಡಿರುವ ಘೋರ ಸಂಗತಿಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ’’ ಎಂದು ಸಿಪಿಐ ಸಂಸದ ಹೇಳಿದ್ದಾರೆ.