ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತ: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆ
Photo : Reuters
ಹೊಸದಿಲ್ಲಿ: ಮಂಗಳವಾರದ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು 48 ಪೈಸೆ ಕುಸಿದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅದರಂತೆ ಫಾರೆಕ್ಸ್ ಮಾರುಕಟ್ಟೆಯಲ್ಲಿ ಒಂದು ಡಾಲರ್ 88.76 ರೂಪಾಯಿಗೆ ಏರಿಕೆ ಕಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ H-1B ವೀಸಾ ಶುಲ್ಕದ ತೀವ್ರ ಏರಿಕೆಯ ಪರಿಣಾಮವಾಗಿ ಫಾರೆಕ್ಸ್ ಮಾರುಕಟ್ಟೆಯಲ್ಲಿ ಆಘಾತದ ಅಲೆಗಳು ಕಾಣಿಸಿಕೊಂಡಿವೆ.
ಫಾರೆಕ್ಸ್ ಮಾರುಕಟ್ಟೆ ತಜ್ಞರ ಪ್ರಕಾರ, ಈ ನಿರ್ಧಾರವು ಭಾರತದ ಐಟಿ ವಲಯದಿಂದ ಹಣ ರವಾನೆ ಮತ್ತು ಸಂಭಾವ್ಯ ಷೇರು ಹೊರಹರಿವಿನ ಬಗ್ಗೆ ಗಂಭೀರ ಆತಂಕ ಮೂಡಿಸಿದೆ. ಈಗಾಗಲೇ ವಿದೇಶಿ ಹೂಡಿಕೆ ಒಳಹರಿವು ದುರ್ಬಲವಾಗಿರುವ ಸಮಯದಲ್ಲಿ, ರೂಪಾಯಿಗೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ವಿದೇಶಿ ವಿನಿಮಯದಲ್ಲಿ ರೂಪಾಯಿ ಡಾಲರ್ ಮುಂದೆ 88.41ರೂ.ಗೆ ವಹಿವಾಟು ಆರಂಭಿಸಿತು. ಕ್ರಮೇಣ ಕುಸಿತ ಕಂಡು 88.76 ರೂ. ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ. ಇದರಿಂದ ಹಿಂದಿನ ದಿನದ ಮುಕ್ತಾಯಕ್ಕಿಂತ 48 ಪೈಸೆ ಕುಸಿತ ದಾಖಲಾಗಿದೆ.
ಸೋಮವಾರದ ವಹಿವಾಟಿನಲ್ಲಿ ರೂಪಾಯಿ 12 ಪೈಸೆ ಕುಸಿತಗೊಂಡು 88.28ಕ್ಕೆ ಮುಕ್ತಾಯಗೊಂಡಿತ್ತು.