ಡಿ. 4 ರಂದು ಭಾರತಕ್ಕೆ ಭೇಟಿ ನೀಡಲಿರುವ ರಶ್ಯ ಅಧ್ಯಕ್ಷ ಪುಟಿನ್
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Photo: PTI)
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿ ರಷ್ಯಾದ ಅಧಿಕೃತ ಸುದ್ದಿಸಂಸ್ಥೆಗಳು ಶುಕ್ರವಾರ ವರದಿ ಮಾಡಿದೆ.
ಈ ಮಾಹಿತಿಯನ್ನು ಭಾರತದ ವಿದೇಶಾಂಗ ಸಚಿವಾಲಯವೂ ಅಧಿಕೃತವಾಗಿ ದೃಢಪಡಿಸಿದೆ.
ಭೇಟಿಯ ಸಂದರ್ಭದಲ್ಲಿ ಪುಟಿನ್ ಅವರು ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿ ಅವರ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.
ವಾರ್ಷಿಕ ಶೃಂಗಸಭೆಯ ಭಾಗವಾಗಿ ನಡೆಯುವ ಈ ಮಾತುಕತೆಯಲ್ಲಿ ಭಾರತ–ರಷ್ಯಾ ಸಂಬಂಧಗಳ ಪ್ರಗತಿ, ಭದ್ರತಾ ಸಹಕಾರ, ಆರ್ಥಿಕ-ವಾಣಿಜ್ಯ ವ್ಯವಹಾರಗಳು, ಇಂಧನ ಹಾಗೂ ಬಾಹ್ಯಾಕಾಶ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿನ ಪಾಲುದಾರಿಕೆಯನ್ನು ಬಲಪಡಿಸುವ ವಿಚಾರಗಳು ಚರ್ಚೆಯಾಗಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಎರಡು ದೇಶಗಳ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. “ಈ ಭೇಟಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖವಾಗಲಿದೆ” ಎಂದು ಸಚಿವಾಲಯವು ಹೇಳಿಕೆಯಲ್ಲಿದೆ.
ರಷ್ಯಾ ಅಧ್ಯಕ್ಷ ಪುಟಿನ್ 2021ರಲ್ಲಿ ಕೊನೆಯ ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಕಳೆದ ವರ್ಷದ ಜುಲೈನಲ್ಲಿ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಾಸ್ಕೋಗೆ ಭೇಟಿ ನೀಡಿದ್ದರು.