×
Ad

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ | ಆರೋಪಿಯಿಂದ ದೇವರ ವಿಗ್ರಹಗಳ ಎರಡು ಕೆಜಿ ಚಿನ್ನ ದುರ್ಬಳಕೆ: ಎಸ್ಐಟಿ ವರದಿ

Update: 2025-10-17 20:45 IST

Photo Credit : PTI

ಪಟ್ಟಣಂತಿಟ್ಟ (ಕೇರಳ): 2019ರಲ್ಲಿ ದ್ವಾರಪಾಲಕ ವಿಗ್ರಹಗಳಿಗೆ ಎಲೆಕ್ಟ್ರೊಪ್ಲೇಟಿಂಗ್ ಪ್ರಾಯೋಜಿಸಿದ ನಂತರ, ಆರೋಪಿ ಉನ್ನಿಕೃಷ್ಣನ್ ಪೋಟ್ಟಿ ಸುಮಾರು ಎರಡು ಕೆಜಿ ಚಿನ್ನವನ್ನು ಅವುಗಳಿಂದ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ತನ್ನ ರಿಮ್ಯಾಂಡ್ ವರದಿಯಲ್ಲಿ ಆರೋಪಿಸಿದೆ.

ರಿಮ್ಯಾಂಡ್ ನಡಾವಳಿಯಂತೆ ಉನ್ನಿಕೃಷ್ಣನ್ ರನ್ನು ಬಂಧಿಸಿ, ಶುಕ್ರವಾರ ನ್ಯಾಯಾಲಯದೆದುರು ಹಾಜರುಪಡಿಸಿದಾಗ, ತನಿಖಾಧಿಕಾರಿ ಎಸ್.ಶ್ರೀ ಧರನ್ ಈ ರಿಮ್ಯಾಂಡ್ ವರದಿಯನ್ನು ರಾನ್ನಿಯಲ್ಲಿರುವ ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಸಲ್ಲಿಸಿದರು.

ವಿಚಾರಣೆಯ ಬಳಿಕ, ಆರೋಪಿ ಉನ್ನಿಕೃಷ್ಣನ್ ಪೋಟ್ಟಿಯನ್ನು ಅಕ್ಟೋಬರ್ 30ರವರೆಗೆ ವಿಶೇಷ ತನಿಖಾ ತಂಡದ ವಶಕ್ಕೆ ನ್ಯಾಯಾಲಯ ಒಪ್ಪಿಸಿತು.

ವರದಿಯ ಪ್ರಕಾರ, 2004ರಿಂದ 2008ರ ನಡುವೆ ಶಬರಿಮಲೆ ದೇವಸ್ಥಾನದ ಅರ್ಚಕರ ಸಹಾಯಕನಾಗಿ ಕಲಸ ಮಾಡಿದ್ದ ಉನ್ನಿಕೃಷ್ಣನ್ ಪೋಟ್ಟಿಗೆ ದ್ವಾರಪಾಲಕ ವಿಗ್ರಹಗಳ ತಾಮ್ರದ ಪ್ರಭಾವಳಿಗೆ 1998ರಲ್ಲಿ ಚಿನ್ನದ ಲೇಪನ ಮಾಡಿರುವ ಸಂಗತಿ ತಿಳಿದಿತ್ತು ಎನ್ನಲಾಗಿದೆ.

ವಂಚನೆ ಹಾಗೂ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಉಣ್ಣಿಕೃಷ್ಣನ್ ಪೋಟ್ಟಿ ಈ ಸಂಗತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಟ್ರವಾಂಕೂರ್ ದೇವಸ್ವಂ ಮಂಡಳಿಗೆ ನಷ್ಟವನ್ನುಂಟು ಮಾಡಿದ್ದಾನೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಸುಮಾರು ಎರಡು ಕೆಜಿಯಷ್ಟು ಚಿನ್ನವನ್ನು ಹೊಂದಿದ್ದ ದ್ವಾರಪಾಲಕ ವಿಗ್ರಹಗಳ ಪ್ರಭಾವಳಿಗಳನ್ನು ದುರಸ್ತಿ ಮಾಡಲು ಉನ್ನಿಕೃಷ್ಣನ್ 2019ರಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆ ಪ್ರಭಾವಳಿಗಳನ್ನು ತೆರವುಗೊಳಿಸಿದ ನಂತರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೊನೆಗೆ ಚೆನ್ನೈನ ಅಂಬತ್ತೂರ್ ನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ಸೇರಿದಂತೆ ವಿವಿಧೆಡೆ ಕೊಂಡೊಯ್ಯಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

“ಸ್ಮಾರ್ಟ್ ಕ್ರಿಯೇಷನ್ಸ್ ನೆರವಿನೊಂದಿಗೆ ಚಿನ್ನ ಲೇಪಿತ ತಾಮ್ರದ ಪ್ರಭಾವಳಿಗಳಿಂದ ಚಿನ್ನವನ್ನು ತೆಗೆಯಲಾಗಿದ್ದು, ಅದನ್ನು ಕಾನೂನುಬಾಹಿರವಾಗಿ ತೆಗೆದುಕೊಳ್ಳಲಾಗಿದೆ. ಈ ಸಂಗತಿಯನ್ನು ಬಚ್ಚಿಡಲು, ಕೇವಲ 394.9 ಗ್ರಾಂ ಚಿನ್ನವನ್ನು ಮಾತ್ರ ಮರುಲೇಪನ ಮಾಡಲಾಗಿದೆ. ಬಳಿಕ ಈ ಪ್ರಭಾವಳಿಗಳನ್ನು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದ್ದು, ನಂತರ, ಶಬರಿಮಲೆ ದೇವಸ್ಥಾನಕ್ಕೆ ಹಿಂದಿರುಗಿಸಲಾಗಿದೆ” ಎಂದು ವರದಿಯಲ್ಲಿ ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News