ರ‍್ಯಾಗಿಂಗ್ ನಿಂದ ನೊಂದು ಬಾಲಕ ಆತ್ಮಹತ್ಯೆ ಪ್ರಕರಣ: ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು (PTI)
ಕೊಚ್ಚಿ: ಕೇರಳದ ಕೊಚ್ಚಿಯ ಖಾಸಗಿ ಶಾಲೆಯೊಂದರಲ್ಲಿ ತನ್ನ ಸಹಪಾಠಿಗಳ ರ‍್ಯಾಗಿಂಗ್ ಹಾಗೂ ಬೆದರಿಕೆಯಿಂದ ಮನನೊಂದು 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಶಾಲೆಯಿಂದ ಮರಳಿದ ನಂತರ ಆ ಬಾಲಕನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಬಾಲಕನನ್ನು ಎರ್ನಾಕುಲಂನ ತಿರುವನಿಯೂರ್ ಪ್ರದೇಶದ ಗ್ಲೋಬಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮಿಹಿರ್ ಅಹಮ್ಮದ್ ಎಂದು ಗುರುತಿಸಲಾಗಿದ್ದು, ಆತ ತನ್ನ ಮನೆಯಿಂದ ಕೆಳಕ್ಕೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ.
ಈ ಸುದ್ದಿಯಿಂದ ಆಘಾತಗೊಂಡಿರುವ ನಟಿ ಸಮಂತಾ ರುತ್ ಪ್ರಭು, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಮಿಹಿರ್ ಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಸಮಂತಾ, “ಇದು 2025. ಹೀಗಿದ್ದೂ ನಾವು ಪ್ರಕಾಶಮಾನವಾದ ಬಾಲಕನ ಜೀವವನ್ನು ಕಳೆದುಕೊಂಡಿದ್ದೇವೆ. ದ್ವೇಷ ಹಾಗೂ ನಂಜಿನಿಂದ ತುಂಬಿಕೊಂಡಿರುವ ಕೆಲ ಜನರಿಂದಾಗಿ ಆತ ತನ್ನ ಜೀವ ಅಂತ್ಯಗೊಳಿಸಿಕೊಂಡಿದ್ದಾನೆ! ಈ ದುರಂತಮಯ ಸಾವು ಬೆದರಿಕೆ, ಕಿರುಕುಳ ಹಾಗೂ ರ‍್ಯಾಗಿಂಗ್ ಕೇವಲ ಹಾನಿಕಾರಕವಲ್ಲದ ಪದ್ಧತಿ ಅಥವಾ ಅಂಗೀಕೃತ ವಿಧಿಯಲ್ಲ; ಬದಲಿಗೆ, ಅವು ಮಾನಸಿಕ, ಭಾವನಾತ್ಮಕ ಹಾಗೂ ಕೆಲವೊಮ್ಮೆ ದೈಹಿಕ ಹಿಂಸೆಯೂ ಆಗಿರುತ್ತವೆ. ನಮ್ಮ ಬಳಿ ಕಠಿಣ ರ‍್ಯಾಗಿಂಗ್ ವಿರೋಧಿ ಕಾನೂನುಗಳಿವೆ. ಹೀಗಿದ್ದೂ, ಮತ್ತೊಬ್ಬ ವಿದ್ಯಾರ್ಥಿ ಬಾಧಿತನಾಗಿದ್ದಾನೆ. ಮಾತನಾಡಲು ಭಯ, ಪರಿಣಾಮದ ಭಯ ಹಾಗೂ ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಎಂಬ ಭಯದಿಂದ. ನಾವು ಎಲ್ಲಿ ವಿಫಲವಾಗುತ್ತಿದ್ದೇವೆ?” ಎಂದು ಪ್ರಶ್ನಿಸಿದ್ದಾರೆ.