2019ರಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅಡ್ಡಿಯಾಗಿದ್ದಕ್ಕೆನನ್ನನ್ನು ಬಂಧಿಸಲಾಗಿತ್ತು: ಸಂಜಯ್ ರಾವತ್
ಸಂಜಯ್ ರಾವತ್ | PTI
ಮುಂಬೈ: 2019ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಾನು ತಡೆದಿದ್ದುದೇ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ತನ್ನನ್ನು ಬಂಧಿಸಿದ್ದರ ಹಿಂದಿನ ಕಾರಣವಾಗಿದೆ ಎಂದು ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ತನ್ನ ಆತ್ಮಕತೆ (ನರಕತಲಾ ಸ್ವರ್ಗ)ಯಲ್ಲಿ ರಾವತ್ ಅವರು ಈ ಆರೋಪ ಮಾಡಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರಕಾರಕ್ಕೆ ತಾನು ರಕ್ಷಣಾ ಗೋಡೆಯಾಗಿ ನಿಂತಿದ್ದಕ್ಕಾಗಿ ತನ್ನ ವಿರುದ್ಧ ಕ್ರಮ ಕೈಗೊಳ್ಳಲಾಯಿತೆಂದು ರಾವತ್ ಆಪಾದಿಸಿದ್ದಾರೆ.
2022ರಲ್ಲಿ ಉದ್ಧವ್ ಠಾಕ್ರೆ ಸರಕಾರದ ಪತನದ ಬಳಿಕ ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ರಾವತ್‌ರನ್ನು ಬಂಧಿಸಿತ್ತು. ಈ ಸಮಯದಲ್ಲಿ ಅವರ ಜೈಲುವಾಸದ ಅನುಭವಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
‘‘ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆದಿದ್ದುದೇ ಈಡಿ ನನ್ನ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವುದಕ್ಕೆ ಪ್ರಾಥಮಿಕ ಕಾರಣವಾಗಿದೆ. ಠಾಕ್ರೆ ಸರಕಾರಕ್ಕೆ ನಾನು ರಕ್ಷಣಾಗೋಡೆಯಾಗಿ ನಿಂತಿದ್ದೆ. ಆನಂತರ ಠಾಕ್ರೆ ಸರಕಾರ ಪತನಗೊಂಡಿತು’’ ಎಂದು ರಾವತ್ ಹೇಳಿದ್ದಾರೆ.
ಏಕನಾಥ ಶಿಂಧೆ ಸರಕಾರವು ಅಸಂವಿಧಾನಿಕ ರೀತಿಯಲ್ಲಿ ರಚನೆಯಾಗಿತ್ತು.ಆದರೂ ತಮ್ಮ ಸರಕಾರವು ಕಾರ್ಯನಿರ್ವಹಿಸಬೇಕಾದರೆ ಸಂಜಯ್ ರಾವತ್ ಜೈಲುಕಂಬಿಗಳ ಹಿಂದಿರಬೇಕು ಎಂಬ ವಿಷಯದಲ್ಲಿ ಆಗಿನ ಸಿಎಂ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಮತಹೊಂದಿದ್ದರು’’ ಎಂದು ರಾವತ್ ಈ ಕೃತಿಯಲ್ಲಿ ಹೇಳಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದ ಹೊರತಾಗಿಯೂ ಪ್ರತಿಪಕ್ಷವಾಗಿ ಕುಳಿತುಕೊಳ್ಳಬೇಕಾಗಿ ಬಂದದ್ದು ಬಿಜೆಪಿಗೆ ನೋವುಂಟು ಮಾಡಿತ್ತು. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಶಿವಸೇನಾ ಕೈಜೋಡಿಸಿ ಸರಕಾರ ರಚಿಸಿತ್ತು. 2019ರಲ್ಲಿ ತನಗೆ ಸರಕಾರ ರಚಿಸಲು ಸಾಧ್ಯವಾಗದೆ ಇದ್ದುದಕ್ಕೆ ರಾವತ್ ಕಾರಣರೆಂದು ಬಿಜೆಪಿ ಭಾವಿಸಿತ್ತು’’ ಎಂದವರು ಹೇಳಿದರು.
ಎಂವಿಎ ಸರಕಾರವು 170 ಶಾಸಕರ ಭರ್ಜರಿ ಬಹುಮತವನ್ನು ಹೊಂದಿದ್ದರಿಂದ, ‘ಆಪರೇಶನ್ ಕಮಲ’ ನಡೆಸುವುದು ಯಶಸ್ವಿಯಾಗಲಾರದೆಂದು ಬಿಜೆಪಿಗೆ ಮನವರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ‘ರಣರಂಗ’ಕ್ಕಿಳಿದವು. ಅನಿಲ್ ದೇಶಮುಖಂ ನವಾಬ್ ಮಲಿಕ್ ಹಾಗೂ ಸಂಜಯ್ ರಾವತ್ ಅವುಗಳ ಗುರಿಗಳಾಗಿದ್ದವು ಎಂದವರು ಹೇಳಿದ್ದಾರೆ.
ಎನ್‌ಸಿಪಿ ನಾಯಕರಾದ ದೇಶಮುಖ್ ಹಾಗೂ ಮಲಿಕ್ ಅವರು ಮಹಾವಿಕಾಸ್ ಅಗಾಡಿ ಸರಕಾರದಲ್ಲಿ ಸಚಿವರಾಗಿದ್ದರು.
ಠಾಕ್ರೆ ವಿರುದ್ಧ ಬಂಡೆದ್ದ 40 ಶಾಸಕರ ಪೈಕಿ 11 ಮಂದಿಯ ಸುತ್ತ ಕುಣಿಕೆಯನ್ನು ಈಡಿ ಬಿಗಿಗೊಳಿಸಿತ್ತು. ಆ ಮೂಲಕ ಎಂವಿಎ ಮೈತ್ರಿಕೂಟದಿಂದ ಹೊರಬರುವಂತೆ ಅವರ ಮೇಲೆ ಒತ್ತಡ ಹೇರಿತ್ತು. ಅವಿಭಜಿತ ಶಿವಸೇನಾದ ಕೆಲವು ಸಂಸದರನ್ನು ಕೂಡಾ ಜಾರಿ ನಿರ್ದೇಶನಾಲಯ ಬಂಧಿಸಿತ್ತು ಎಂದು ರಾವತ್ ಹೇಳಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಜೊತೆಯಾಗಿ ಸ್ಪರ್ಧಿಸಿತ್ತು. ಆದರೆ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಭಿನ್ನಾಭಿಪ್ರಾಯವುಂಟಾಗಿದ್ದರಿಂದ ಶಿವಸೇನಾ ಪಕ್ಷವು ಬಿಜೆಪಿಯ ಸಖ್ಯವನ್ನು ತೊರೆದಿತ್ತು.
ಆನಂತರ ಶಿವಸೇನಾ ಪಕ್ಷವು ಕಾಂಗ್ರೆಸ್ ಹಾಗೂ ಅವಿಭಜಿತ ಎನ್‌ಸಿಪಿ ಪಕ್ಷವನ್ನು ಒಳಗೊಂಡ ಮಹಾವಿಕಾಸ್ ಮೈತ್ರಿಕೂಟದ ಭಾಗವಾಯಿತು. ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರಕಾರವು ಅಧಿಕಾರಕ್ಕೇರಿತ್ತು.