×
Ad

ಕೇಂದ್ರವು ಎಸ್‌ಸಿ/ಎಸ್‌ಟಿಗಳು, ಒಬಿಸಿಗಳಿಗೆ ಮೀಸಲಾದ ಖಾಲಿ ಹುದ್ದೆಗಳ ಕುರಿತು ಮಾಹಿತಿಯನ್ನು ಬಚ್ಚಿಡುತ್ತಿದೆ: ಆರ್‌ಟಿಐ ಕಾರ್ಯಕರ್ತನ ಆರೋಪ

Update: 2025-07-28 20:55 IST

 ಸಾಂದರ್ಭಿಕ ಚಿತ್ರ

ಬೆಂಗಳೂರು,ಜು.28: ಪರಿಶಿಷ್ಟ ಜಾತಿಗಳು(ಎಸ್‌ಸಿ),ಪರಿಶಿಷ್ಟ ವರ್ಗಗಳು(ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾಗಿರುವ ಖಾಲಿಯಿರುವ ಹುದ್ದೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಮರೆಮಾಚಲು ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದೆ ಎಂದು ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ (ಸಿಎಚ್‌ಆರ್)ನ ನಿರ್ದೇಶಕ ಹಾಗೂ ಆರ್‌ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್ ಅವರು ಆಪಾದಿಸಿದ್ದಾರೆ.

ಜಾತಿ ಆಧಾರಿತ ಸಮಾನತೆ ಕುರಿತು ರಾಷ್ಟ್ರೀಯ ಚರ್ಚೆಯ ಹಿನ್ನೆಲೆಯಲ್ಲಿ ನಾಯಕ್ ದೇಶದ ಅಧಿಕಾರಶಾಹಿಯೊಳಗೆ ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯಲ್ಲಿ ವ್ಯವಸ್ಥಿತ ವೈಫಲ್ಯಗಳನ್ನು ಬೆಟ್ಟು ಮಾಡಿದ್ದಾರೆ.

ಎಸ್‌ಸಿ/ಎಸ್‌ಟಿಗಳ ಕಲ್ಯಾಣ ಕುರಿತು ಡಿಸೆಂಬರ್ 2024ರ ಸಂಸದೀಯ ಸಮಿತಿ ವರದಿಯ ಆಧಾರದಲ್ಲಿ ನಾಯಕ್ ಆರ್‌ಟಿಐ ಅಡಿ ಪ್ರಶ್ನೆಗಳನ್ನು ಕೇಳಿದ್ದರು. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ನಿರಂತರ ವಿಳಂಬ ಹಾಗೂ ಸಾರ್ವಜನಿಕ ವಲಯದ ಸಂಸ್ಥೆ(ಪಿಎಸ್‌ಯು)ಗಳು,ಸಚಿವಾಲಯಗಳು ಮತ್ತು ಬ್ಯಾಂಕುಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಸಂಪೂರ್ಣ ಅನುಪಸ್ಥಿತಿಗಾಗಿ ಸರಕಾರವನ್ನು ಟೀಕಿಸಿರುವ ವರದಿಯು,‘ಸೂಕ್ತ ಅಭ್ಯರ್ಥಿಗಳ ಕೊರತೆ’ ಎಂಬ ಸಮಜಾಯಿಷಿಯನ್ನು ಆಧಾರರಹಿತ ಎಂದು ತಿರಸ್ಕರಿಸಿದೆ. ವ್ಯವಸ್ಥಿತವಾಗಿ ಹೊರಗಿಡುವಿಕೆ ಈ ಸಮಸ್ಯೆಗೆ ಕಾರಣವೆಂದು ಹೇಳಿರುವ ವರದಿಯು,ಅದನ್ನು ಸರಿಪಡಿಸಲು ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದೆ.

ಖಾಲಿಯಿರುವ ಹುದ್ದೆಗಳು ಮತ್ತು ಮೀಸಲಾತಿ ನೀತಿಗಳ ಅನುಷ್ಠಾನಕ್ಕಾಗಿ ಸಂಪರ್ಕ ಅಧಿಕಾರಿಗಳ ನೇಮಕಾತಿ ಕುರಿತು ಮಾಹಿತಿಯನ್ನು ಕೋರಿ ನಾಯಕ್ ವಿವಿಧ ಇಲಾಖೆಗಳಿಗೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು.

ಆದರೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪ್ರಸ್ತುತವಲ್ಲದ ಹಿಂದಿನ ವರ್ಷಗಳ ನೇಮಕಾತಿಗಳ ಅಂಕಿಅಂಶಗಳನ್ನು ಒದಗಿಸಿದ್ದಾರೆ ಮತ್ತು ತನ್ನ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ಹೇಳಿದ ನಾಯಕ್,ಇದು ರಾಜಕೀಯವಾಗಿ ಸೂಕ್ಷ್ಮ ಮಾಹಿತಿಯನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಅಥವಾ ನಿಷ್ಕ್ರಿಯ ಟ್ರ್ಯಾಕಿಂಗ್ ವ್ಯವಸ್ಥೆಯ ಪುರಾವೆಯಾಗಿದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News