'ಮತಗಳ ಕಳ್ಳತನ' ಕುರಿತ ರಾಹುಲ್ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು: ಶರದ್ ಪವಾರ್
“ಮಹಾರಾಷ್ಟ್ರ ಚುನಾವಣೆಗೆ ಮುನ್ನ ಮಹಾ ವಿಕಾಸ್ ಅಘಾಡಿ ಎಚ್ಚರಿಕೆ ವಹಿಸಬೇಕಿತ್ತು”
ರಾಹುಲ್ ಗಾಂಧಿ , ಶರದ್ ಪವಾರ್ | PTI
ನಾಗ್ಪುರ : ರಾಹುಲ್ ಗಾಂಧಿ ಮಾಡಿರುವ ಮತ ಕಳ್ಳತನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್, ಮಹಾರಾಷ್ಟ್ರದ ಚುನಾವಣೆಗೆ ಮುನ್ನ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ವಿಸ್ತೃತ ಪುರಾವೆಯೊಂದಿಗೆ ಮಾಹಿತಿ ನೀಡಿದ್ದಾರೆ. ನಾವು ಈ ಬಗ್ಗೆ ಮೊದಲೇ ಪರಿಶೀಲಿಸಬೇಕಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಈ ವಿಷಯದ ಬಗ್ಗೆ ಪರಿಶೀಲಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿದ್ದು, 6.5 ಲಕ್ಷ ಮತಗಳ ಪೈಕಿ 1 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಚುನಾವಣಾ ಆಯೋಗ ಬಿಜೆಪಿಯ ಮತಗಳ್ಳತನದಲ್ಲಿ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.