×
Ad

ಡ್ರೀಮ್ ಲೈನರ್‌ನಲ್ಲಿ ತಾಂತ್ರಿಕ ದೋಷ : ಎಮರ್ಜನ್ಸಿ ಸಿಸ್ಟಮ್‌ ಮರು ತಪಾಸಣೆಗೆ ಏರ್‌ಇಂಡಿಯಾಕ್ಕೆ ಡಿಜಿಸಿಎ ಆದೇಶ

Update: 2025-10-12 15:46 IST

Photo | indiatoday

ಹೊಸದಿಲ್ಲಿ,ಅ.12: ಅ.4ರಂದು ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ಹಾರಾಟ ನಡೆಸುತ್ತಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದ ರ್ಯಾಮ್ ಏರ್ ಟರ್ಬೈನ್(ಆರ್‌ಎಟಿ) ಅನಿರೀಕ್ಷಿತವಾಗಿ ಸಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಈ ವಿಮಾನಗಳಲ್ಲಿಯ ಆರ್‌ಎಟಿ ಎಮರ್ಜನ್ಸಿ ಸಿಸ್ಟಮ್‌ನ ಮರುತಪಾಸಣೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು(ಡಿಜಿಸಿಎ) ಏರ್ ಇಂಡಿಯಾಕ್ಕೆ ಆದೇಶಿಸಿದೆ.

ಡಿಜಿಸಿಎ ಮೂಲಗಳ ಪ್ರಕಾರ ವಿಮಾನದ ಇತ್ತೀಚಿನ ‘ಡಿ’ ಪರಿಶೀಲನೆ ಸಮಯದಲ್ಲಿ ನಡೆಸಲಾದ ನಿರ್ವಹಣಾ ಕಾರ್ಯಗಳನ್ನು, ವಿಶೇಷವಾಗಿ ಪವರ್ ಕಂಡಿಷನಿಂಗ್ ಮಾಡ್ಯೂಲ್(ಪಿಸಿಎಂ)ನ ಬದಲಿಸುವಿಕೆಗೆ ಸಂಬಂಧಿಸಿದ ಕೆಲಸಗಳನ್ನು ಮರುಪರಿಶೀಲಿಸುವಂತೆ ಮತ್ತು ಯಾವುದೇ ವ್ಯತ್ಯಾಸಗಳನ್ನು ಗುರುತಿಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ.

ಈ ಹಿಂದೆ ಪಿಸಿಎಂ ಬದಲಿಸಲಾಗಿದ್ದ ಎಲ್ಲ ವಿಮಾನಗಳಲ್ಲಿನ ಆರ್‌ಎಟಿ ಅಳವಡಿಕೆಯನ್ನು ಮರು ತಪಾಸಣೆ ನಡೆಸುವಂತೆಯೂ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ.

ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ಸಂಚರಿಸುತ್ತಿದ್ದ ವಿಮಾನದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಕುರಿತು ಡಿಜಿಸಿಎ ತನಿಖೆ ಮುಂದುವರಿಯಲಿದ್ದು, ಅದು ಅಮೆರಿಕದ ಬೋಯಿಂಗ್ ಕಂಪೆನಿಯಿಂದ ವಿವರವಾದ ವರದಿಯನ್ನು ಕೋರಿದೆ. ಬೋಯಿಂಗ್ 787 ವಿಮಾನಗಳಲ್ಲಿ ಇದೇ ರೀತಿ ಆರ್‌ಎಟಿ ಅನಿರೀಕ್ಷಿತವಾಗಿ ಸಕ್ರಿಯಗೊಂಡಿದ್ದ ಘಟನೆಗಳ ಕುರಿತು ಜಾಗತಿಕ ಮಾಹಿತಿಗಳನ್ನು ಒದಗಿಸುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ರೂಪಿಸುವಂತೆ ಡಿಜಿಸಿಎ ಬೋಯಿಂಗ್‌ಗೆ ಸೂಚಿಸಿದೆ.

ಪಿಸಿಎಂ ಬದಲಿಸುವಿಕೆಯ ಬಳಿಕ ವಿಶ್ವಾದ್ಯಂತ ವಿಮಾನಯಾನ ನಿರ್ವಾಹಕರಿಂದ ಸ್ವೀಕರಿಸಲಾದ ಯಾವುದೇ ಸೇವಾ ತೊಂದರೆ ವರದಿಗಳ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುವಂತೆಯೂ ಡಿಜಿಸಿಎ ಕೋರಿದೆ.

ಅ.4ರಂದು ಅಮೃತಸರದಿಂದ ನಿರ್ಗಮಿಸಿದ್ದ ಏರ್ ಇಂಡಿಯಾದ 787 ಡ್ರೀಮ್‌ಲೈನರ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಳಿಯುವ ಅಂತಿಮ ಹಂತದಲ್ಲಿದ್ದಾಗ ನೆಲದಿಂದ ಸುಮಾರು 400 ಅಡಿ ಎತ್ತರದಲ್ಲಿ ಆರ್‌ಎಟಿ ಅನಿರೀಕ್ಷಿತವಾಗಿ ಸಕ್ರಿಯಗೊಂಡಿತ್ತಾದರೂ ವಿಮಾನವು ಸುರಕ್ಷಿತವಾಗಿ ಇಳಿದಿತ್ತು.

ವಿಮಾನವು ಇಳಿದಾಗ ಅದರ ಎಲ್ಲ ವಿದ್ಯುತ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಏರ್ ಇಂಡಿಯಾ ನಂತರ ಹೇಳಿಕೆಯಲ್ಲಿ ತಿಳಿಸಿತ್ತು.

ಗಮನಾರ್ಹವಾಗಿ ಜೂನ್‌ನಲ್ಲಿ ಅಹ್ಮದಾಬಾದ್‌ನಲ್ಲಿ ಪತನಗೊಂಡ 787 ಡ್ರೀಮ್‌ಲೈನರ್‌ನಲ್ಲಿಯೂ ಆರ್‌ಎಟಿ ಆಜ್ಞೆಯನ್ನು ನೀಡದಿದ್ದರೂ ಸಕ್ರಿಯಗೊಂಡಿತ್ತು. ಅವಳಿ ಇಂಜಿನ್‌ಗಳ ವೈಫಲ್ಯ ಅಥವಾ ಸಂಪೂರ್ಣ ಇಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವೈಫಲ್ಯಗಳ ಸಂದರ್ಭದಲ್ಲಿ ಆರ್‌ಎಟಿ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಅದು ತುರ್ತು ವಿದ್ಯುತ್ ಉತ್ಪಾದನೆಗೆ ಗಾಳಿಯ ವೇಗವನ್ನು ಬಳಸಿಕೊಳ್ಳುತ್ತದೆ. ಇಂಧನ ಪೂರೈಕೆ ಕಡಿತದಿಂದಾಗಿ ಇಂಜಿನ್‌ಗಳು ಸ್ತಬ್ಧಗೊಂಡಿದ್ದರಿಂದ ಎಮರ್ಜನ್ಸಿ ಸಿಸ್ಟಮ್ ಸಕ್ರಿಯಗೊಂಡಿತ್ತು ಎಂದು ಮಧ್ಯಂತರ ತನಿಖಾ ವರದಿಯು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News