ಸಿಕ್ಕಿಂ ಪ್ರವಾಹ : 40ಕ್ಕೇರಿದ ಸಾವಿನ ಸಂಖ್ಯೆ, 20 ಮಂದಿಯ ಮೃತದೇಹ ಪತ್ತೆ
Photo: PTI
ಗ್ಯಾಂಗ್ಟಕ್ : ಸಿಕ್ಕಿಂನಲ್ಲಿ ಮೇಘ ಸ್ಫೋಟದಿಂದ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ 7 ಯೋಧರು ಸಹಿತ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ. 20 ಮೃತದೇಹಗಳು ಪತ್ತೆಯಾಗಿವೆ. ಪ್ರವಾಹದಲ್ಲಿ ಸಿಲುಕಿದ ಸಾವಿರಾರು ಜನರನ್ನು ರಕ್ಷಿಸಲು ಸೇನೆ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
‘‘ಲಾಚೆನ್ ಹಾಗೂ ಲಾಚುಂಗ್ನಲ್ಲಿ ಸುಮಾರು 3 ಸಾವಿರ ಜನರು ಸಿಲುಕಿಕೊಂಡಿದ್ದಾರೆ. ಅದೇ ಪ್ರದೇಶದಲ್ಲಿ ಮೋಟಾರು ಸೈಕಲ್ನಲ್ಲಿ ಸಾಗುತ್ತಿದ್ದ 3,150 ಮಂದಿ ಕೂಡ ಸಿಲುಕಿಕೊಂಡಿದ್ದಾರೆ. ನಾವು ಎಲ್ಲರನ್ನೂ ಸೇನೆ ಹಾಗೂ ವಾಯು ಪಡೆ ಹೆಲಿಕಾಪ್ಟರ್ ಮೂಲಕ ತೆರವುಗೊಳಿಸುತ್ತಿದ್ದೇವೆ’’ ಎಂದು ಸಿಕ್ಕಿಂನ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ತಿಳಿಸಿದ್ದಾರೆ.
ಇನ್ನೊಂದು ಹಿಮನದಿ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯಕ್ಕೆ ತಮ್ಮ ಪ್ರವಾಸವನ್ನು ವಿಳಂಬಿಸುವಂತೆ ಆಡಳಿತ ಪ್ರವಾಸಿಗಳನ್ನು ಆಗ್ರಹಿಸಿದೆ.
ಮಾಂಗನ್ ಜಿಲ್ಲೆಯಲ್ಲಿ 8, ನಮಾಚಿಯಲ್ಲಿ 2 ಹಾಗೂ ಗ್ಯಾಂಗ್ಟಕ್ನಲ್ಲಿ 1 ಸೇರಿದಂತೆ ಸಿಕ್ಕಿಂನಲ್ಲಿ ಒಟ್ಟು 11 ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಅಲ್ಲದೆ, ನಾಲ್ಕು ಜಿಲ್ಲೆಗಳಲ್ಲಿ ನೀರಿನ ಪೈಪ್, ಒಳಚರಂಡಿ ಪೈಪ್ ಹಾಗೂ 277 ಮನೆಗಳಿಗೆ ಹಾನಿ ಸಂಭವಿಸಿದೆ. ಉತ್ತರ ಸಿಕ್ಕಿಂನಲ್ಲಿ ಎನ್ಡಿಆರ್ಎಫ್ ಸ್ಥಳೀಯ ನಿವಾಸಿಗಳನ್ನು ತೆರವುಗೊಳಿಸುತ್ತಿದೆ.
ಈ ನಡುವೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್, ‘‘ಪ್ರವಾಹದಿಂದ ಅಣೆಕಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಅಣೆಕಟ್ಟು ಕೊಚ್ಚಿಕೊಂಡು ಹೋಗಿದೆ. ಮೇಘ ಸ್ಫೋಟ ಸಂಭವಿಸಿರುವುದು ಹಾಗೂ ಲ್ಹೊನಾಕ್ ಸರೋವರ ಸ್ಫೋಟಗೊಂಡಿರುವುದು ಸತ್ಯ. ಆದರೆ, ಈ ಹಿಂದಿನ ಸರಕಾರದ ಕೆಳದರ್ಜೆಯ ನಿರ್ಮಾಣ ಕಾಮಗಾರಿಯಿಂದ ಅಣೆಕಟ್ಟಿಗೆ ಹಾನಿಯಾಗಿದೆ’’ ಎಂದಿದ್ದಾರೆ.