×
Ad

2014ರಿಂದ 102 ಒಸಿಐ ಕಾರ್ಡ್‌ಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ

Update: 2024-02-12 16:54 IST

Photo: scroll.in

ಹೊಸದಿಲ್ಲಿ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ 2014 ಹಾಗೂ ಮೇ 2023ರ ನಡುವೆ ಕನಿಷ್ಠ 102 ಓವರ್‌ಸೀಸ್‌ ಸಿಟಿಜನ್‌ಶಿಪ್‌ ಆಫ್‌ ಇಂಡಿಯಾ (OCI) ಕಾರ್ಡ್‌ಗಳನ್ನು ರದ್ದುಗೊಳಿಸಿದೆ ಎಂದು ಆರ್‌ಟಿಐ ವಿವರಗಳ ಆಧಾರದಲ್ಲಿ ಆರ್ಟಿಕಲ್‌ 14 ವರದಿ ಮಾಡಿದೆ.

ಸದ್ಯ 45 ಲಕ್ಷಕ್ಕೂ ಅಧಿಕ ಜನರು ಒಸಿಐ ಕಾರ್ಡ್‌ಗಳನ್ನು ಹೊಂದಿದ್ದಾರೆ. 102 ಒಸಿಐ ಕಾರ್ಡ್‌ಗಳ ರದ್ದತಿಗೆ, ಪೌರತ್ವ ಕಾಯಿದೆ 1955 ಇದರ ಸೆಕ್ಷನ್‌ 7ಡಿ ಅಡಿಯಲ್ಲಿ ಸರ್ಕಾರ ಸಮರ್ಥನೆ ನೀಡಿದೆ. ಒಸಿಐ ಕಾರ್ಡ್‌ಗಳನ್ನು ವಂಚನೆಯ ಮೂಲಕ ಪಡೆದುಕೊಂಡಿದ್ದರೆ, ಅಥವಾ ಕಾರ್ಡ್‌ ಹೊಂದಿರುವವರು ಸಂವಿಧಾನಕ್ಕೆ ಅಗೌರವ ತೋರಿದರೆ, ಯುದ್ಧದ ಸಂದರ್ಭ ವೈರಿಗೆ ಸಹಾಯ ಮಾಡಿದರೆ, ಜೈಲು ಶಿಕ್ಷೆ ಅನುಭವಿಸಿದರೆ ಅಥವಾ ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಯ ಹಿತಾಸಕ್ತಿಯಿಂದ ಹಾಗೆ ಮಾಡುವುದು ಅಗತ್ಯವೆಂದು ಕಂಡಲ್ಲಿ ಕಾರ್ಡ್‌ ಅನ್ನು ಸೆಕ್ಷನ್‌ 7ಡಿ ಅನ್ವಯ ರದ್ದುಗೊಳಿಸಬಹುದಾಗಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎಷ್ಟು ಒಸಿಐ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಆರ್‌ಟಿಐ ಪ್ರಶ್ನೆಗೆ, ತನ್ನಲ್ಲಿ ಅಂತಹ ಮಾಹಿತಿಯಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆದರೆ ಮೇ 2023ರ ತನಕ ಒಟ್ಟು 2,84,574 ಒಸಿಐ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಈ ಕಾರ್ಡ್‌ಗಳ ಪೈಕಿ 2,59,554 ಕಾರ್ಡ್‌ಗಳನ್ನು ಮತ್ತೆ ಒದಗಿಸಲು ರದ್ದುಗೊಳಿಸಲಾಗಿದ್ದರೆ, ಇನ್ನಿತರ ಕಾರ್ಡ್‌ಗಳು ಕಳೆದುಹೋಗಿದ್ದವು, ಹಾನಿಗೀಡಾಗಿದ್ದವು, ಕಾರ್ಡುದಾರರು ಮೃತಪಟ್ಟಿದ್ದರು ಹಾಗೂ ತಪ್ಪಾಗಿ ಮುದ್ರಿತವಾಗ ಕಾರಣಕ್ಕೆ ರದ್ದುಪಡಿಸಲಾಗಿತ್ತು.

2014ರಿಂದೀಚೆಗೆ ಕೇಂದ್ರ ಸರ್ಕಾರವು ಹಲವು ಪತ್ರಕರ್ತರು, ಹೋರಾಟಗಾರರು ಮತ್ತು ಶಿಕ್ಷಣ ತಜ್ಞರ ಒಸಿಐ ಕಾರ್ಡ್‌ಗಳನ್ನು ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News