ಎಸ್‌ಐಆರ್: 9 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳ ಕರಡು ಪಟ್ಟಿಗಳಿಂದ ಸುಮಾರು 6.5 ಕೋಟಿ ಮತದಾರರ ಹೆಸರು ಮಾಯ!
ಸಾಂದರ್ಭಿಕ ಚಿತ್ರ | Photo Credit ; PTI
ಹೊಸದಿಲ್ಲಿ: ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಡಿ (ಎಸ್‌ಐಆರ್) ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಗಳಿಂದ ಸುಮಾರು 6.5 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಅ.27ರಂದು ಆರಂಭಗೊಂಡಿದ್ದ ಎಸ್‌ಐಆರ್‌ನ ಎರಡನೇ ಹಂತದ ಮೊದಲು ಈ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು 50.90 ಕೋಟಿ ಮತದಾರರನ್ನು ಹೊಂದಿದ್ದವು. ಪ್ರತ್ಯೇಕ ಕರಡು ಮತದಾರರ ಪಟ್ಟಿಗಳ ಪ್ರಕಟಣೆಯ ಬಳಿಕ ಮತದಾರರ ಸಂಖ್ಯೆ 44.40 ಕೋಟಿಗೆ ಇಳಿದಿದೆ.
ಕರಡು ಪಟ್ಟಿಗಳಿಂದ ತೆಗೆದುಹಾಕಲಾಗಿರುವ ಮತದಾರರ ಹೆಸರುಗಳನ್ನು ‘ಎಎಸ್‌ಡಿ’ ಅಥವಾ ಗೈರು, ಸ್ಥಳಾಂತರಿತ ಮತ್ತು ಮೃತರು/ಬಹು ನಮೂದುಗಳ ವರ್ಗದಲ್ಲಿ ಇರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಐಆರ್ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಎಣಿಕೆ ಫಾರಮ್‌ಗಳ ಸಂಗ್ರಹ ತುಂಬ ಕಡಿಮೆಯಾಗಿದೆ ಎಂದು ಈ ಹಿಂದೆ ಆಯೋಗದ ಅಧಿಕಾರಿಗಳು ಹೇಳಿದ್ದರು.
ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಮಂಗಳವಾರ ಪ್ರಕಟಗೊಂಡ ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಗಳಿಂದ 2.89 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದ್ದು,12.55 ಕೋಟಿ ಮತದಾರರು ಉಳಿದುಕೊಂಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು,ಲಕ್ಷದ್ವೀಪ, ಛತ್ತೀಸ್‌ಗಡ,ಗೋವಾ,ಗುಜರಾತ್,ಕೇರಳ,ಮಧ್ಯಪ್ರದೇಶ,ಪುದುಚೇರಿ,ರಾಜಸ್ಥಾನ,ತಮಿಳುನಾಡು,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನ.4ರಿಂದ ಎರಡನೇ ಹಂತದ ಎಸ್‌ಐಆರ್ ಆರಂಭಗೊಂಡಿತ್ತು.
ಅಸ್ಸಾಮಿನಲ್ಲಿ ಪ್ರತ್ಯೇಕ ಮತದಾರರ ಪಟ್ಟಿಗಳ ‘ವಿಶೇಷ ಪರಿಷ್ಕರಣೆ’ ನಡೆಯುತ್ತಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ 2003ರ ಮತದಾರರ ಪಟ್ಟಿಗಳನ್ನು ಬಳಸಿದಂತೆ ರಾಜ್ಯಗಳಲ್ಲಿ ಹಿಂದಿನ ಎಸ್‌ಐಆರ್ ಕಟ್-ಆಫ್ ದಿನಾಂಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಹೆಚ್ಚಿನ ರಾಜ್ಯಗಳಲ್ಲಿ ಹಿಂದಿನ ಎಸ್‌ಐಆರ್ 2002 ಮತ್ತು 2004ರ ನಡುವೆ ನಡೆದಿತ್ತು.