ಮಹಾರಾಷ್ಟ್ರ | ಸಾಮಾಜಿಕ ನ್ಯಾಯ, ಬುಡಕಟ್ಟು ಇಲಾಖೆಯ ಅನುದಾನ ಕಡಿತಗೊಳಿಸಿ ʼಲಡ್ಕಿ ಬಹಿನ್ʼ ಯೋಜನೆಗೆ ಬಳಕೆ; ವರದಿ
Photo credit: PTI
ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರಕಾರದ ʼಲಡ್ಕಿ ಬಹಿನ್ʼ ಯೋಜನೆಗೆ ಹಣ ಹೊಂದಿಸಲು ಪ್ರಸಕ್ತ ಬಜೆಟ್ ನಲ್ಲಿ ಕೆಲವು ಇಲಾಖೆಗಳಿಗೆ ಅನುದಾನದಲ್ಲಿ ಕಡಿತಗೊಳಿಸಲಾಗಿದೆ ಎಂದು Times of India ವರದಿ ಮಾಡಿದೆ.
ಬಿಜೆಪಿ ನೇತತ್ವದ ಮಹಾರಾಷ್ಟ್ರದ ಮಹಾಯುತಿ ಸರಕಾರವು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಎಸ್ಸಿ ಮತ್ತು ಎಸ್ಟಿ ಘಟಕಗಳಿಗೆ ಅನುದಾನವನ್ನು 40-42% ರಷ್ಟು ಹೆಚ್ಚಿಸಲಾಗಿದೆ. ಆದರೆ ಸಾಮಾಜಿಕ ನ್ಯಾಯ, ಬುಡಕಟ್ಟು ಅಭಿವೃದ್ಧಿ ಮತ್ತು ಇತರ ಹಿಂದುಳಿದ ಬಹುಜನ ಕಲ್ಯಾಣ ಇಲಾಖೆಗಳ ಅನುದಾನಗಳಲ್ಲಿ ಕುಸಿತ ಕಂಡುಬಂದಿದೆ.
ಲಡ್ಕಿ ಬಹಿನ್ ಯೋಜನೆಗಾಗಿ ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಗಳಿಂದ ಹಣವನ್ನು ಮರುಹಂಚಿಕೆ ಮಾಡಿರುವುದನ್ನು ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. "ಈ ಯೋಜನೆಯಡಿಯಲ್ಲಿ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಿರುವ ಸಾಧ್ಯತೆಯಿದೆ", ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಶಿವಸೇನೆಯ ಸಂಜಯ್ ಶಿರಾಸತ್ ಅವರು, “ಸಾಮಾಜಿಕ ನ್ಯಾಯ ಇಲಾಖೆಯಿಂದ 7,000 ಕೋಟಿ ರೂ. ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಯಿಂದ 3,000 ಕೋಟಿ ರೂ.ಸೇರಿಂದಂತೆ ಸುಮಾರು 10,000 ಕೋಟಿ ರೂ.ಗಳು ಅನುದಾನವನ್ನು ಲಡ್ಕಿ ಬಹಿನ್ ಯೋಜನೆಗೆ ನೀಡಲಾಗಿದೆ ಎಂದು ನನಗೆ ಮಾಹಿತಿಯಿದೆ", ಎಂದು ಹೇಳಿದ್ದಾರೆ.