×
Ad

ಟಿಕೆಟ್ ರದ್ದತಿಯಿಂದ 5 ವರ್ಷಗಳಲ್ಲಿ 700 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದ ದಕ್ಷಿಣ ರೈಲ್ವೆ !

Update: 2025-07-11 22:09 IST

PC : X 

ಹೈದರಾಬಾದ್: 2021ರಿಂದ 2025ರ ನಡುವೆ ದಕ್ಷಿಣ ಕೇಂದ್ರೀಯ ರೈಲ್ವೆ ವಲಯ ಕೇವಲ ಮುಂಗಡ ಟಿಕೆಟ್ ರದ್ದತಿಯೊಂದರಿಂದಲೇ ಸುಮಾರು 698 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಗಳಿಸಿರುವುದು ಆರ್‌ಟಿಐ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ. ಈ ಪೈಕಿ 2024ನೇ ವರ್ಷವೊಂದರಲ್ಲೇ ಮುಂಗಡ ಟಿಕೆಟ್ ರದ್ದತಿಯ ಶುಲ್ಕವಾಗಿ 198 ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ.

ಈ ಅಂಕಿ-ಸಂಖ್ಯೆಯು ದಕ್ಷಿಣ ಕೇಂದ್ರೀಯ ರೈಲ್ವೆಯ ವಾರ್ಷಿಕ ಆದಾಯದ ಪೈಕಿ ಶೇ. 3.5ರಷ್ಟು ಆದಾಯದ ಉಡುಗೊರೆಯನ್ನು ಮುಂಗಡ ಟಿಕೆಟ್ ರದ್ದತಿಯೊಂದೇ ನೀಡಿರುವುದನ್ನು ತೋರಿಸುತ್ತಿದೆ. ಈ ಮೊತ್ತ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಮೂಲಗಳು, ಜುಲೈ 1ರಿಂದ ಮುಂಗಡ ಟಿಕೆಟ್ ರದ್ದತಿಯ ಶುಲ್ಕವನ್ನು ಹೆಚ್ಚುವರಿ ಪರಿಷ್ಕರಣೆ ಮಾಡಿಲಾಗಿದೆ ಎಂದು ಹೇಳಿವೆ.

ನಿಯಮಗಳ ಪ್ರಕಾರ, ರೈಲು ಹೊರಡುವ ನಿಗದಿತ ಸಮಯಕ್ಕೆ 12 ರಿಂದ 48 ಗಂಟೆಗಳ ಮೊದಲು ಮುಂಗಡ ಟಿಕೆಟ್ ರದ್ದುಗೊಳಿಸಿದರೆ, ರೈಲ್ವೆ ಟಿಕೆಟ್‌ ದರದ ಶೇ. 25ರಷ್ಟು ಶುಲ್ಕವನ್ನು ರದ್ದುಗೊಳಿಸಲಾಗುತ್ತದೆ. ಒಂದು ವೇಳೆ 4 ಗಂಟೆಯಿಂದ 12 ಗಂಟೆಯೊಳಗೇನಾದರೂ ಮುಂಗಡ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಈ ಶುಲ್ಕದ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತದೆ. ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂದರ್ಭದಲ್ಲಿ ಕ್ಲೆರಿಕಲ್ ಶುಲ್ಕವಾಗಿ 60ರೂ.ಗಳನ್ನು ಕಡಿತಗೊಳಿಸಲಾಗುತ್ತದೆ.

ಆರ್‌ಟಿಐ ಮಾಹಿತಿ ಪ್ರಕಾರ, 2024ರಲ್ಲಿ ದಕ್ಷಿಣ ಕೇಂದ್ರೀಯ ರೈಲ್ವೆ ವಲಯದಲ್ಲಿ ಪ್ರಯಾಣಿಸುವ 1.4 ಕೋಟಿ ಪ್ರಯಾಣಿಕರು ತಮ್ಮ ಖಚಿತಗೊಂಡ ಮುಂಗಡ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದು, ಈ ಪೈಕಿ ಕಾಯುವಿಕೆ ಸರದಿಯಲ್ಲಿರುವ ಪ್ರಯಾಣಿಕರ ಸಂಖ್ಯೆಯೇ 65 ಲಕ್ಷದಷ್ಟಿದೆ ಎಂದು ಹೇಳಲಾಗಿದೆ. ಈ ರದ್ದತಿಯ ಪೈಕಿ ಸಿಕಂದರಾಬಾದ್ ವಲಯದಲ್ಲಿ ಅತ್ಯಧಿಕ ಪ್ರಮಾಣದ ಟಿಕೆಟ್ ರದ್ದತಿಯಾಗಿದೆ. ವಾಸ್ತವವಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ಟಿಕೆಟ್ ರದ್ದುಗೊಳಿಸುವ ವೇಟಿಂಗ್-ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬುದು ಆರ್‌ಟಿಐ ಮಾಹಿತಿಯಲ್ಲಿ ಬಯಲಾಗಿದೆ.

2021ರಲ್ಲಿ 15.96 ಲಕ್ಷ ಪ್ರಯಾಣಿಕರು ತಮ್ಮ ಮುಂಗಡ ಟಿಕೆಟ್ ಗಳನ್ನು ರದ್ದುಗೊಳಿಸಿದ್ದರೆ, ಈ ಪ್ರಮಾಣ 2024ರಲ್ಲಿ 65.62 ಲಕ್ಷಕ್ಕೆ ಏರಿಕೆಯಾಗಿದೆ. 2025ರ ಜನವರಿಯಿಂದ ಮೇ ತಿಂಗಳ ಮಧ್ಯವೊಂದರಲ್ಲೇ ವೇಟಿಂಗ್-ಲಿಸ್ಟ್‌ನಲ್ಲಿದ್ದ 31.52 ಲಕ್ಷ ಪ್ರಯಾಣಿಕರು ತಮ್ಮ ಮುಂಗಡ ರೈಲು ಟಿಕೆಟ್ ಗಳನ್ನು ರದ್ದುಗೊಳಿಸಿದ್ದಾರೆ.

“ಇದಕ್ಕೆ ಪ್ರತಿಯಾಗಿ, 2021ರಿಂದ ಮೇ 2025ರ ನಡುವೆ ಪ್ರಯಾಣಿಕರಿಗೆ 2,900 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಮರುಪಾವತಿ ಮಾಡಲಾಗಿದೆ. 2024ನೇ ವರ್ಷವೊಂದರಲ್ಲೇ ದಕ್ಷಿಣ ಕೇಂದ್ರೀಯ ರೈಲ್ವೆ ವಲಯವು 871.37 ಕೋಟಿ ರೂ. ಅನ್ನು ಮರುಪಾವತಿ ಮಾಡಿದೆ” ಎಂದು ಮಾಹಿತಿ ಹಕ್ಕು ಅರ್ಜಿಗೆ ದೊರೆತಿರುವ ಉತ್ತರದಲ್ಲಿ ಬಹಿರಂಗವಾಗಿದೆ. ಇದೇ ವೇಳೆ, ದಕ್ಷಿಣ ಕೇಂದ್ರ ರೈಲ್ವೆ ವಲಯವು ಪ್ರಯಾಣಿಕರ ರೈಲು ಪ್ರಯಾಣದಿಂದ 5,710 ಕೋಟಿ ರೂ. ಆದಾಯ ಗಳಿಸಿದೆ” ಎಂಬ ಸಂಗತಿಯೂ ಬಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News