×
Ad

ತ್ರಿಭಾಷಾ ನೀತಿ ಕಡ್ಡಾಯಗೊಳಿಸಿರುವ ಸಂವಿಧಾನದ ನಿಯಮ ತಿಳಿಸಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಸ್ಟಾಲಿನ್ ಪ್ರಶ್ನೆ

Update: 2025-02-16 21:29 IST

ಎಂ.ಕೆ. ಸ್ಟಾಲಿನ್ | PC : PTI 

ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ತ್ರಿ ಭಾಷಾ ಸೂತ್ರವನ್ನು ಒಪ್ಪಿಕೊಳ್ಳುವ ವರೆಗೆ ತಮಿಳುನಾಡಿಗೆ ಅನುದಾನ ನೀಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

ಇದನ್ನು ‘‘ಬ್ಲಾಕ್‌ ಮೇಲ್’’ ಎಂದು ಕರೆದಿರುವ ಸ್ಟಾಲಿನ್, ಇಂಗ್ಲೀಷ್, ಪ್ರಾದೇಶಿಕ ಭಾಷೆ ಹಾಗೂ ಹಿಂದಿ ಎಂಬ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಿದ ಸಾಂವಿಧಾನಿಕ ನಿಯಮವನ್ನು ತಿಳಿಸುವಂತೆ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಕೇಳಿದ್ದಾರೆ.

ಧರ್ಮೇಂದ್ರ ಪ್ರಧಾನ್ ಫೆಬ್ರವರಿ 15ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ತಮಿಳುನಾಡು ಭಾರತೀಯ ಸಂವಿಧಾನದ ನಿಯಮಗಳನ್ನು ಒಪ್ಪಿಕೊಳ್ಳಬೇಕು ಹಾಗೂ ತ್ರಿಭಾಷಾ ನೀತಿ ಕಾನೂನಿನ ನಿಯಮವಾಗಿದೆ ಎಂದು ಹೇಳಿರುವ ವೀಡಿಯೊ ತುಣಕನ್ನು ಸ್ಟಾಲಿನ್ ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಸಂವಿಧಾನದ ಯಾವ ಕಲಂ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದೆ? ಶಿಕ್ಷಣ ಸಚಿವರು ಹಾಗೆ ಹೇಳಲು ಸಾಧ್ಯವೇ? ಭಾರತೀಯ ಒಕ್ಕೂಟ ರಾಜ್ಯಗಳಿಂದ ರೂಪುಗೊಂಡಿದೆ. ಶಿಕ್ಷಣ ಎರಡೂ ಸರಕಾರಗಳಿಗೆ ಸಂಬಂಧಿಸಿದ ಪಟ್ಟಿಯಲ್ಲಿ ಸೇರಿದೆ. ಕೇಂದ್ರ ಸರಕಾರ ಏಕಸ್ವಾಮ್ಯ ಅಧಿಪತಿಯಲ್ಲ ಎಂದು ಅವರು ಹೇಳಿದ್ದಾರೆ.

ತ್ರಿಭಾಷಾ ಸೂತ್ರವನ್ನು ಅನುಸರಿಸುವವರೆಗೆ ತಮಿಳುನಾಡಿಗೆ ಅನುದಾನ ನೀಡುವುದಿಲ್ಲ ಎಂಬ ಬ್ಲಾಕ್‌ ಮೇಲ್ ಅನ್ನು ತಮಿಳರು ಸಹಿಸಲಾರರು. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯವು ಕೇಂದ್ರದಿಂದ ಬಾಕಿಯನ್ನು ಕೇಳುವುದು ಅದರ ಹಕ್ಕು. ರಾಜ್ಯವು ತನ್ನ ವೈಯುಕ್ತಿಕ ಸಂಪತ್ತು ಎಂದು ಕೇಂದ್ರ ಸಚಿವರು ದುರಹಂಕಾರದಿಂದ ಮಾತನಾಡಿದರೆ, ಅಂತಹ ಸಂದರ್ಭ ಕೇಂದ್ರ ಸರಕಾರ ತಮಿಳು ಜನರ ಆಕ್ರೋಶವನ್ನು ಎದುರಿಸಬೇಕಾದೀತು ಎಂದು ಸ್ಟಾಲಿನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News