×
Ad

ಹಿಂದಿ ಹೇರಿಕೆ ವಿವಾದ | ಎನ್‌ಇಪಿ ‘ವಿಷ’,ಭಾಷಾ ಸಮಾನತೆಗಾಗಿ ಆಗ್ರಹ ದುರಭಿಮಾನವಲ್ಲ: ಸ್ಟಾಲಿನ್

Update: 2025-03-06 19:52 IST

 ಎಂ.ಕೆ.ಸ್ಟಾಲಿನ್ | PC : NDTV 

ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ವಿಷ ಎಂದು ಬಣ್ಣಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ನಾವು ರಾಜ್ಯದಲ್ಲಿ ತಮಿಳಿಗೆ ಸರಿಯಾದ ಸ್ಥಾನವನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಕ್ಕಾಗಿ ಕೇಳಿ ಬರುತ್ತಿರುವ ದುರಭಿಮಾನಿಗಳು ಎಂಬಂತಹ ಟೀಕೆಗಳನ್ನು ತಳ್ಳಿ ಹಾಕಿರುವ ಸ್ಟಾಲಿನ್,‘ಹಿಂದಿ ಹಠವಾದಿ’ಗಳು ನಿಜವಾದ ದುರಭಿಮಾನಿಗಳಾಗಿದ್ದಾರೆ ಎಂದಿದ್ದಾರೆ.

‘ನೀವು ಸವಲತ್ತುಗಳಿಗೆ ಒಗ್ಗಿಕೊಂಡಾಗ ಸಮಾನತೆಗಾಗಿ ಕೇಳುವುದು ತಪ್ಪೆಂಬಂತೆ ಭಾಸವಾಗುತ್ತದೆ’ ತಮಿಳುನಾಡಿನಲ್ಲಿ ತಮಿಳಿಗೆ ಸರಿಯಾದ ಸ್ಥಾನಕ್ಕಾಗಿ ಆಗ್ರಹಿಸಿದ ‘ಅಪರಾಧ’ಕ್ಕಾಗಿ ಕೆಲವು ಭಾಷಾಂಧರು ನಮ್ಮನ್ನು ದುರಭಿಮಾನಿಗಳು ಮತ್ತು ದೇಶವಿರೋಧಿಗಳು ಎಂದು ಬ್ರ್ಯಾಂಡ್ ಮಾಡಿದಾಗ ನನಗೆ ಈ ಪ್ರಸಿದ್ಧ ಉಕ್ತಿ ನೆನಪಾಗುತ್ತದೆ ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ದಾಳಿ ನಡೆಸಿರುವ ಸ್ಟಾಲಿನ್,ನಾಥುರಾಮ ಗೋಡ್ಸೆಯನ್ನು ವೈಭವೀಕರಿಸುವ ಜನರು ಡಿಎಂಕೆಯ ದೇಶಭಕ್ತಿಯನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಚೀನಿ ಆಕ್ರಮಣ, ಬಾಂಗ್ಲಾದೇಶ ವಿಮೋಚನಾ ಸಮರ ಮತ್ತು ಕಾರ್ಗಿಲ್ ಯುದ್ಧದ ಸಂದರ್ಭಗಳಲ್ಲಿ ಡಿಎಂಕೆ ಮತ್ತು ತಮಿಳುನಾಡು ಸರಕಾರ ಅತ್ಯಂತ ಹೆಚ್ಚಿನ ಹಣದ ಕೊಡುಗೆಯನ್ನು ನೀಡಿದ್ದವು ಎಂದಿದ್ದಾರೆ. ಮಹಾತ್ಮಾ ಗಾಂಧಿಯವರನ್ನು ಕೊಂದಿದ್ದು ಬಿಜೆಪಿಯ ಸೈದ್ಧಾಂತಿಕ ಪೂರ್ವಜ ಎಂದು ಅವರು ಆಪಾದಿಸಿದ್ದಾರೆ.

‘ಭಾಷಾ ಸಮಾನತೆಗಾಗಿ ಕೇಳುವುದು ದುರಭಿಮಾನವಲ್ಲ. ದುರಭಿಮಾನ ಹೇಗಿರುತ್ತದೆ ಎಂದು ತಿಳಿಯಲು ಬಯಸಿದ್ದೀರಾ? 140 ಕೋಟಿ ಪ್ರಜೆಗಳನ್ನು ನಿಯಂತ್ರಿಸುವ ಮೂರು ಕ್ರಿಮಿನಲ್ ಕಾನೂನುಗಳನ್ನು ತಮಿಳರು ಓದುವ ಮೂಲಕ ಉಚ್ಚರಿಸಲೂ ಅಥವಾ ಗ್ರಹಿಸಲೂ ಸಾಧ್ಯವಿಲ್ಲದ ಭಾಷೆಯಲ್ಲಿ ಹೆಸರಿಸಿರುವುದು ದುರಭಿಮಾನ. ದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿರುವ ರಾಜ್ಯವನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುವುದು ಮತ್ತು ಎನ್‌ಸಿಪಿ ಎಂಬ ವಿಷವನ್ನು ನುಂಗಲು ನಿರಾಕರಿಸಿದ್ದಕ್ಕಾಗಿ ಅದಕ್ಕೆ ನ್ಯಾಯಯುತ ಪಾಲನ್ನು ವಂಚಿಸುವುದು ದುರಭಿಮಾನ’ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News