ಸಂದಿಗ್ಧತೆಯಲ್ಲಿ ಸಿಲ್ಕ್ಯಾರ ಸುರಂಗ ನಿರ್ಮಾಣ ಕಾರ್ಮಿಕರು!
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಇತ್ತೀಚೆಗೆ ಕುಸಿದ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ಸತತ ಪ್ರಯತ್ನದಿಂದ ರಕ್ಷಿಸಿದ ನಂತರ ಈ ಸುರಂಗ ನಿರ್ಮಾಣ ಕಾಮಗಾರಿಯ ಕಾರ್ಮಿಕರೀಗ ಮನೆಗೆ ಮರಳಬೇಕೇ ಅಥವಾ ಅಲ್ಲಿಯೇ ಉಳಿಯಬೇಕೇ ಎಂಬ ಸಂದಿಗ್ಧತೆಯಲ್ಲಿದ್ದಾರೆ.
ಮತ್ತೆ ನಿರ್ಮಾಣ ಕಾಮಗಾರಿ ಯಾವಾಗ ಆರಂಭಗೊಳ್ಳಲಿದೆ ಎಂದು ತಿಳಿಯದೇ ಇರುವುದರಿಂದ ಹಲವು ಕಾರ್ಮಿಕರು ರಜೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವರು ತಮ್ಮ ಕುಟುಂಬಗಳು ತಮಗೆ ಈ ಅಪಾಯಕಾರಿ ಕೆಲಸ ಬಿಟ್ಟುಬಿಡುವಂತೆ ಸಲಹೆ ನೀಡಿವೆ ಎಂದು ಹೇಳುತ್ತಿದ್ದಾರೆ.
ಸುರಕ್ಷತಾ ಆಡಿಟ್ ಪೂರ್ಣಗೊಂಡ ನಂತರವಷ್ಟೇ ಕಾಮಗಾರಿ ಮತ್ತೆ ಆರಂಭಗೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಗುಡ್ಡವನ್ನು ಮೇಲಿನಿಂದ ಸುಮಾರು 45 ಮೀಟರಿನಷ್ಟು ಅಗೆಯಲಾಗಿದ್ದರಿಂದ ಅಲ್ಲಿ ಕಲ್ಲು ಮಣ್ಣುಗಳ ರಾಶಿಯೇ ಬಿದ್ದಿದೆ.
ತಾವು ಇಲ್ಲಿಯೇ ಉಳಿಯಬೇಕೇ ಅಥವಾ ತಮ್ಮೂರುಗಳಿಗೆ ವಾಪಸಾಗಬೇಕೇ ಎಂಬ ಕುರಿತು ತಿಳಿಯದು ಎಂದು ಕೆಲ ಕಾರ್ಮಿಕರು ಹೇಳುತ್ತಿದ್ದಾರೆ.
ಗುತ್ತಿಗೆದಾರ ತಮಗೆ ಒಂದೆರಡು ದಿನ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ ಎಂದು ಕೆಲ ಕಾರ್ಮಿಕರು ಹೇಳುತ್ತಿದ್ದಾರೆ ಹಾಗೂ ತಮ್ಮ ರಜೆ ವಿಸ್ತರಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.
ಸಿಲ್ಕ್ಯಾರದ ಈ ಸುರಂಗದಿಂದ ಸುಮಾರು 200 ಮೀಟರ್ ದೂರದಲ್ಲಿ ಕ್ಯಾಬಿನ್‌ಗಳಲ್ಲಿ ಈ ಕಾರ್ಮಿಕರನ್ನು ಇರಿಸಲಾಗಿದ್ದು ಒಂದು ಕ್ಯಾಬಿನ್‌ನಲ್ಲಿ ನಾಲ್ಕು ಜನ ಉಳಿದುಕೊಳ್ಳುತ್ತಾರೆ, ಆಹಾರ ವೆಚ್ಚವನ್ನು ಕಂಪೆನಿಯೇ ಭರಿಸುತ್ತಿದೆ.
ಉಳಿದಂತೆ ಅಧಿಕಾರಿಗಳು ಮತ್ತು ಆಡಳಿತಾತ್ಮಕ ಸಿಬ್ಬಂದಿ ಸುರಂಗ ಸಮೀಪದ ಅತಿಥಿ ಗೃಹಗಳು ಮತ್ತು ಹೋಂಸ್ಟೇಗಳಲ್ಲಿ ವಾಸಿಸುತ್ತಿದದ್ದಾರೆ.