×
Ad

ಜಾಧವಪುರ ವಿವಿಯಲ್ಲಿ ರ‍್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

Update: 2023-08-11 08:20 IST

Photo:https://twitter.com/ians_india

ಕೊಲ್ಕತ್ತಾ: ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾದ ಎರಡೇ ದಿನಗಳಲ್ಲಿ ಜಾಧವಪುರ ವಿವಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬರು ಹಾಸ್ಟೆಲ್ ನ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

ಸ್ವಪ್ನೊದೀಪ್ ಖಂಡು ಎಂಬ ವಿದ್ಯಾರ್ಥಿಯ ದೇಹ ವಿವಸ್ತ್ರ ಸ್ಥಿತಿಯಲ್ಲಿ ಕಟ್ಟಡದಿಂದ ಕೆಲ ಅಡಿಗಳಷ್ಟು ದೂರದಲ್ಲಿ ಕಂಡುಬಂದಿದ್ದು, 18 ವರ್ಷದ ವಿದ್ಯಾರ್ಥಿ ರ‍್ಯಾಗಿಂಗ್ ಗೆ ಬಲಿಯಾಗಿದ್ದಾನೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿವಿ ಅಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದು, ಇದು ಎರಡು ವಾರಗಳ ಒಳಗೆ ವರದಿ ಸಲ್ಲಿಸಲಿದೆ. ವಿದ್ಯಾರ್ಥಿ ಎರಡನೇ ಮಹಡಿಯಿಂದ ಜಿಗಿದದ್ದಾಗಿ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಇತರ ಹಲವು ಅಂಶಗಳು ಇದು ರ‍್ಯಾಗಿಂಗ್ ನ ಪರಿಣಾಮ ಎನ್ನುವುದನ್ನು ದೃಢಪಡಿಸುತ್ತವೆ. ಈ ಆಘಾತಕಾರಿ ರ‍್ಯಾಗಿಂಗ್  ಯಾವಾಗ ಕೊನೆಗೊಳ್ಳುತ್ತದೆ ಎಂದು ಸ್ವಪ್ನೊದೀಪ್ ತನ್ನ ಸಹಪಾಠಿಗಳ ಜತೆ ಚರ್ಚಿಸಿದ್ದ ಎಂದು ತಿಳಿದುಬಂದಿದೆ. ಒಂದು ದಿನ ಇಡೀ ರಾತ್ರಿ ರ‍್ಯಾಗಿಂಗ್  ಕಾರಣದಿಂದ ಈತ ನಿದ್ದೆ ಮಾಡಲು ಸಾಧ್ಯವಾಗದ ಬಗ್ಗೆ ಇತರ ವಿದ್ಯಾರ್ಥಿಗಳು ಶಿಕ್ಷಕರ ಬಳಿ ದೂರು ನೀಡಿದ್ದರು ಎಂದು ಸಹಪಾಠಿಗಳು ವಿವರಿಸಿದ್ದಾರೆ.

ಸ್ವಪ್ನೊದೀಪ್ ಬೆಂಗಾಲಿ ಪದವಿ ಕೋರ್ಸ್ ಗೆ ಸೇರಿದ್ದರು. ತನ್ನ ತಾಯಿಗೆ ಬುಧವಾರ ಸಂಜೆ ಪದೇ ಪದೇ ಕರೆ ಮಾಡಿ, ನನ್ನ ಜೀವ ಅಪಾಯದಲ್ಲಿದೆ. ಆದ್ದರಿಂದ ನಾನು ನಾದಿಯಾದ ಹನ್ಸ್ ಕಾಳಿಯಲ್ಲಿರುವ ಮನೆಗೆ ವಾಪಸ್ಸಾಗುವುದಾಗಿ ಬೇಡಿಕೊಂಡಿದ್ದ ಎಂದು ತಂದೆ ಪೊಲೀಸರಿಗೆ ವಿವರಿಸಿದ್ದಾರೆ.

ಹಿರಿಯ ವಿದ್ಯಾರ್ಥಿಗಳು ಮಾಡಿದ ರ‍್ಯಾಗಿಂಗ್ ಗೆ ಈತ ಬಲಿಯಾಗಿದ್ದಾನೆ ಎಂದು ಕೆಲ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಪೋಸ್ಟ್ ಗಳಲ್ಲಿ ವಿವರಿಸಿದ್ದಾರೆ. ಬುಧವಾರ ರಾತ್ರಿ ಟೆರೇಸ್ ನಲ್ಲಿ ನಗ್ನವಾಗಿ ಓಡುವಂತೆ ಬಲವಂತಪಡಿಸಲಾಗಿತ್ತು ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News