×
Ad

ಗೋವಾದಲ್ಲಿ ಮಗುವನ್ನು ಕೊಂದಿದ್ದ ಸಿಇಒ ಸುಚನಾ ಸೇಠ್; ಪತಿಯಿಂದ ಮಾಸಿಕ 2.5 ಲಕ್ಷ ರೂ.ಜೀವನಾಂಶ ಕೋರಿದ್ದರು!

Update: 2024-01-10 17:10 IST

ಸುಚನಾ ಸೇಠ್‌ (Photo:X)

ಹೊಸದಿಲ್ಲಿ : ಪತಿ ಪಿ.ಆರ್.ವೆಂಕಟರಮಣ ಜೊತೆ ವಿಚ್ಛೇದನದ ಕಹಿ ಹೋರಾಟದ ನಡುವೆಯೇ ತನ್ನ ನಾಲ್ಕರ ಹರೆಯದ ಪುತ್ರನ ಕೊಲೆ ಆರೋಪಿ ಸುಚನಾ ಸೇಠ್ ಆಗಸ್ಟ್‌ನಲ್ಲಿ ಪತಿಯ ವಿರುದ್ಧ ಕೌಟುಂಬಿಕ ಹಿಂಸೆ ಆರೋಪವನ್ನು ಹೊರಿಸಿದ್ದು, ನ್ಯಾಯಾಲಯವು ನಿರ್ಬಂಧಕಾಜ್ಞೆಯನ್ನು ಹೊರಡಿಸಿತ್ತು. ಪತಿ ತನ್ನ ಮತ್ತು ಮಗುವಿನ ಮೇಲೆ ದೈಹಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದ ಆಕೆ, ಪತಿಯು ವಾರ್ಷಿಕ ಒಂದು ಕೋಟಿ ರೂ.ಆದಾಯ ಹೊಂದಿರುವುದರಿಂದ ತನಗೆ ಮಾಸಿಕ 2.5 ಲಕ್ಷ ರೂ.ಗಳ ಜೀವನಾಂಶದ ಕೋರಿಕೆಯನ್ನಿಟ್ಟಿದ್ದಳು.

ಕೌಟುಂಬಿಕ ದೌರ್ಜನ್ಯದ ಆರೋಪಕ್ಕೆ ಸಮರ್ಥನೆಯಾಗಿ ಸುಚನಾ ವಾಟ್ಸ್‌ಆ್ಯಪ್ ಸಂದೇಶಗಳು ಮತ್ತು ಚಿತ್ರಗಳ ಪ್ರತಿಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದಳು ಎನ್ನುವುದನ್ನು ಸುದ್ದಿಸಂಸ್ಥೆಗೆ ಲಭ್ಯವಾಗಿರುವ ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ಮಗುವಿನ ಹತ್ಯೆಯ ಸಂದರ್ಭದಲ್ಲಿ ಇಂಡೋನೇಶ್ಯಾದಲ್ಲಿದ್ದ ವೆಂಕಟರಮಣ ಕೌಟುಂಬಿಕ ಹಿಂಸೆಯ ಆರೋಪಗಳನ್ನು ನಿರಾಕರಿಸಿದ್ದರು. ಆದಾಗ್ಯೂ ನಿರ್ಬಂಧಕಾಜ್ಞೆಯ ಷರತ್ತುಗಳಂತೆ ಅವರು ಪತ್ನಿಯ ಮನೆಯನ್ನು ಪ್ರವೇಶಿಸುವುದನ್ನು ಅಥವಾ ಪತ್ನಿ ಮತ್ತು ಮಗುವಿನೊಂದಿಗೆ ದೂರವಾಣಿ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸುವುದನ್ನು ನಿಷೇಧಿಸಲಾಗಿತ್ತು.

ಸೆಪ್ಟಂಬರ್‌ನಿಂದ ಮಾಸಿಕ 20,000 ರೂ.ಗಳ ‘ಮಧ್ಯಂತರ ಜೀವನಾಂಶ’ವನ್ನು ನೀಡುವಂತೆ ವೆಂಕಟರಮಣ ಅವರಿಗೆ ನ್ಯಾಯಾಲಯವು ಸೂಚಿಸಿತ್ತು.

ಮಗುವನ್ನು ಪ್ರತಿ ರವಿವಾರ ಭೇಟಿಯಾಗಲು ನ್ಯಾಯಾಲಯವು ವೆಂಕಟರಮಣ ಅವರಿಗೆ ಅನುಮತಿಯನ್ನು ನೀಡಿತ್ತೆನ್ನಲಾಗಿದ್ದು, ಇದು ಸುಚನಾಳನ್ನು ಅಸಮಾಧಾನಗೊಳಿಸಿತ್ತು. ನ್ಯಾಯಾಲಯದ ಆದೇಶವು ಆಕೆ ಮಗುವನ್ನು ಕೊಲ್ಲಲು ಕಾರಣವಾಗಿರಬಹುದು ಎಂದು ಪೋಲಿಸರು ಊಹಿಸಿದ್ದಾರೆ.

ಕೌಟುಂಬಿಕ ಹಿಂಸಾಚಾರ ಪ್ರಕರಣದ ವಿಚಾರಣೆ ಕೊನೆಯ ಬಾರಿಗೆ ಡಿ.12ರಂದು ನಡೆದಿತ್ತು ಮತ್ತು ನ್ಯಾಯಾಲಯವು ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತ್ತು.ಅದಾಗಿ ಸುಮಾರು ಮೂರು ವಾರಗಳ ಬಳಿಕ ಮಗುವಿನೊಂದಿಗೆ ಗೋವಾದ ಕಾಂಡೋಲಿಮ್‌ಗೆ ಆಗಮಿಸಿದ್ದ ಸುಚನಾ ತಾನು ತಂಗಿದ್ದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದು, ಶವವನ್ನು ಬ್ಯಾಗಿನಲ್ಲಿ ತುಂಬಿಕೊಂಡು ಬೆಂಗಳೂರಿಗೆ ಪರಾರಿಯಾಗುತ್ತಿದ್ದಾಗ ಚಿತ್ರದುರ್ಗ ಸಮೀಪದ ಐಮಂಗಲದಲ್ಲಿ ಪೋಲಿಸರ ಬಲೆಗೆ ಬಿದ್ದಿದ್ದಳು.

ಸುಚನಾ ಮತ್ತು ವೆಂಕಟರಮಣ ವಿವಾಹ 2010 ನವಂಬರ್‌ನಲ್ಲಿ ನಡೆದಿದ್ದು, 2019 ಆಗಸ್ಟ್‌ನಲ್ಲಿ ಮಗ ಚಿನ್ಮಯ ಜನಿಸಿದ್ದ. ತಾನು ಮಾರ್ಚ್ 2021ರಿಂದ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿದ್ದೇನೆ ಎಂದು ಸುಚನಾ ನ್ಯಾಯಾಲಯಕ್ಕೆ ತಿಳಿಸಿದ್ದಳು ಎನ್ನಲಾಗಿದೆ.

ಸುಚನಾಳನ್ನು ಆರು ದಿನಗಳ ಕಾಲ ಗೋವಾ ಪೋಲಿಸರ ಕಸ್ಟಡಿಗೆ ನೀಡಲಾಗಿದೆ. ಆಕೆ ಉಳಿದುಕೊಂಡಿದ್ದ ಕೋಣೆಯಲ್ಲಿ ರಕ್ತಸಿಕ್ತ ಟವೆಲ್ ಮತ್ತು ಕೆಮ್ಮಿನ ಸಿರಪ್‌ಗಳ ಖಾಲಿ ಬಾಟಲಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ವಿವರಣೆಗಳನ್ನು ಪೋಲಿಸರು ನಂಬುತ್ತಿಲ್ಲ. ಟವೆಲ್‌ನಲ್ಲಿದ್ದ ಕಲೆಗಳು ತನ್ನ ಮುಟ್ಟಿನ ರಕ್ತದ್ದು ಎಂದು ಸುಚನಾ ಪೋಲಿಸರಿಗೆ ತಿಳಿಸಿದ್ದಳು.

ಮಗು ಹೇಗೆ ಸತ್ತಿತ್ತು ಎನ್ನುವುದು ತನಗೆ ತಿಳಿದಿಲ್ಲ, ತಾನು ನಿದ್ರೆಯಿಂದ ಎದ್ದ ಬಳಿಕ ಮಗು ಸತ್ತಿದ್ದು ತನಗೆ ಗೊತ್ತಾಗಿತ್ತು ಎಂದು ಸುಚನಾ ಪೋಲಿಸರಿಗೆ ತಿಳಿಸಿದ್ದಾಳೆ.

ಸುಚನಾ ಮಗುವಿಗೆ ಹೆಚ್ಚಿನ ಡೋಸ್‌ನಲ್ಲಿ ಕೆಮ್ಮಿನ ಸಿರಪ್‌ಗಳನ್ನು ನೀಡಿರಬಹುದು ಮತ್ತು ಮಂಪರಿಗೆ ಜಾರಿದ ಬಳಿಕ ತಲೆದಿಂಬು ಅಥವಾ ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ. ಮಗುವನ್ನು ಉಸಿರುಗಟ್ಟಿಸಿರಬಹುದು ಎಂದು ಮರಣೋತ್ತರ ಪರೀಕ್ಷಾ ವರದಿಯು ಸೂಚಿಸಿದೆ.

ಸುಚನಾ ಮಣಿಕಟ್ಟಿನ ನರಗಳನ್ನು ಕತ್ತರಿಸಿಕೊಂಡಿರುವುದು ಕಂಡು ಬಂದಿದ್ದು, ಮಗುವಿನ ಹತ್ಯೆ ಬಳಿಕ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News