ಬೆಂಗಳೂರು ಅರಮನೆ ಮೈದಾನ ಸ್ವಾಧೀನ: ಒಂದು ವಾರದೊಳಗೆ ಟಿಡಿಆರ್ ಠೇವಣಿಗೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರು ಅರಮನೆ ಮೈದಾನದ 15 ಎಕರೆಗಳಿಗೂ ಅಧಿಕ ಭೂಮಿಗೆ ಸಂಬಂಧಿಸಿದಂತೆ 3,400 ಕೋಟಿ ರೂ.ಗಳ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ಒಂದು ವಾರದೊಳಗೆ ನ್ಯಾಯಾಲಯದಲ್ಲಿ ಠೇವಣಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಅರವಿಂದ ಕುಮಾರ ಅವರ ಪೀಠವು,ಅದು ಸ್ಥಿರವಾದ ನಿಲುವನ್ನು ಹೊಂದಿಲ್ಲ,ಅದರ ನಿಲುವು ಬದಲಾಗುತ್ತಲೇ ಇರುತ್ತದೆ ಎಂದು ಟೀಕಿಸಿತು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನುಬದ್ಧ ಉತ್ತರಾಧಿಕಾರಿ ಮತ್ತು ಇತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ರಾಜ್ಯ ಸರಕಾರ ಮತ್ತು ಅದರ ಅಧಿಕಾರಿಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಕಪಿಲ ಸಿಬಲ್, ರಾಜೀವ ಧವನ್, ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಮತ್ತಿತರರು,ರಾಜ್ಯ ಸರಕಾರವು ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ಗೆದ್ದಿರುವುದರಿಂದ ನ್ಯಾಯಾಲಯವು ವಿಷಯದಲ್ಲಿಯ ಮುಖ್ಯ ಮೇಲ್ಮನವಿಯ ಬಗ್ಗೆ ನಿರ್ಧರಿಸಬೇಕು ಎಂದು ವಾದಿಸಿದರು.
ಸುಗ್ರೀವಾಜ್ಞೆಯನ್ನು ಹೊರಡಿಸಿದ ಬಳಿಕ 15 ಎಕರೆ ಮತ್ತು 39 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಸರಕಾರವು ಬಯಸುವುದಿಲ್ಲ ಎಂದು ಹೇಳಿದ ಸಿಬಲ್,1994ರಲ್ಲಿ ಸ್ವಾಧೀನ ನಡೆದಿದ್ದರೂ 2024ರ ಪ್ರಕಾರ ಮೌಲ್ಯಮಾಪನವನ್ನು ಮಾಡಲಾಗುತ್ತಿದೆ ಎಂದು ಎತ್ತಿ ತೋರಿಸಿದರು.
ಪ್ರಸಕ್ತ ಟಿಡಿಆರ್ಗೆ ಅವಕಾಶ ನೀಡಿದರೆ 462 ಎಕರೆಗಳ ಸಂಪೂರ್ಣ ಸ್ವಾಧೀನದ ಮೌಲ್ಯಮಾಪನವು ರಾಜ್ಯದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರೂ.ಗೂ ಅಧಿಕವಾಗುತ್ತದೆ ಎಂದು ಹೇಳಿದ ಸಿಬಲ್, ನಮ್ಮ ಪರವಾಗಿ ಉಚ್ಚ ನ್ಯಾಯಾಲಯದ ಒಂದು ತೀರ್ಪು ಮತ್ತು ಸುಗ್ರೀವಾಜ್ಞೆ ಇವೆ. ನಾವು ಜುಲೈ,2024ರಲ್ಲಿ ಮಾತ್ರ ಸ್ವಾಧೀನಕ್ಕೆ ಪಡೆದಿದ್ದೇವೆ ಎಂದು ಹೇಳಿದರು. ಅರ್ಜಿಯನ್ನು ವಿರೋಧಿಸಿದ ಮೈಸೂರು ರಾಜವಂಶಸ್ಥರ ಪರ ಹಿರಿಯ ವಕೀಲರಾದ ಎ.ಕೆ.ಗಂಗೂಲಿ, ರಾಕೇಶ ದ್ವಿವೇದಿ, ಮಾಧವಿ ದಿವಾನ್ ಮತ್ತು ಗೋಪಾಲ ಶಂಕರನಾರಾಯಣನ್ ಅವರು, ಡಿ.10,2024ಕ್ಕೆ ರಾಜ್ಯದ ಅಧಿಕಾರಿಗಳು ನ್ಯಾಯಾಂಗ ನಿಂದನೆಯ ತಪ್ಪಿತಸ್ಥರು ಎನ್ನುವುದು ಕಂಡು ಬಂದಿದೆ ಎಂದು ಹೇಳಿದರು. ಅವರ ವಾದಗಳನ್ನು ಮತ್ತು ಭೂಮಿಯನ್ನು 2010ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು ಎನ್ನುವುದನ್ನು ನ್ಯಾಯಾಲಯವು ಪರಿಗಣಿಸಿತು.
ರಾಜ್ಯವು ಈ ವಿಷಯದಲ್ಲಿ ದ್ವಂದ್ವ ನಿಲುವನ್ನು ಹೊಂದಿದೆ ಎಂದು ಶಂಕರನಾರಾಯಣನ್ ಹೇಳಿದರೆ, ಅದು ಈ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲು ತನ್ನದೇ ಆದ ಚಾಣಾಕ್ಷ ಮಾರ್ಗಗಳನ್ನು ಕಂಡುಕೊಂಡಿದೆ ಎಂದು ದಿವಾನ ಹೇಳಿದರು.
ಒಂದು ವಾರದೊಳಗೆ ಅವರು ಠೇವಣಿಯಿಡಲಿ,ಬಳಿಕ ನಾವು ಇದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಮಾ.20ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.