ನಿರ್ವಸಿತ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಸರಕಾರದ ಉದ್ಯೋಗದಲ್ಲಿ ವಯೋಮಾನ ರಿಯಾಯಿತಿ ಕೋರಿಕೆ: ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕೇಂದ್ರ ಸರಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ನಿರ್ವಸಿತ ಕಾಶ್ಮೀರಿ ಪಂಡಿತರಿಗೆ ವಯೋಮಾನ ರಿಯಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಕ್ರಂನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಇಂತಹ ವಿಷಯಗಳು ಸರಕಾರದ ನೀತಿ ನಿರೂಪಣೆಯ ವ್ಯಾಪ್ತಿಗೆ ಒಳಪಡಲಿದ್ದು, ನ್ಯಾಯಾಲಯವು ಕಾರ್ಯಾಂಗದ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಹೀಗಾಗಿ, ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕಣಿವೆಯಲ್ಲಿ ವ್ಯಾಪಕ ಪ್ರಮಾಣದ ಹಿಂಸಾಚಾರ ನಡೆಯುತ್ತಿರುವುದರಿಂದ, ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ತೊರೆದಿದ್ದು, ಅವರನ್ನು 1984ರ ಸಿಖ್ ವಿರೋಧಿ ದಂಗೆ ಅಥವಾ 2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗಿಂತ ಭಿನ್ನವಾಗಿ ಪರಿಗಣಿಸಬಾರದು. ಕೇಂದ್ರ ಸರಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಅವರಿಗೆ ನೀಡಿದ್ದ ವಯೋಮಾನದ ರಿಯಾಯಿತಿಯಂತೆಯೇ ಕಾಶ್ಮೀರಿ ಪಂಡಿತರಿಗೂ ವಯೋಮಾನ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಈ ಸಂಬಂಧ ಯಾವುದೇ ಬಗೆಯ ನಿರ್ದೇಶನ ನೀಡಲು ನ್ಯಾಯಾಲಯ ನಿರಾಕರಿಸಿತು. ಮಧ್ಯಪ್ರವೇಶಿಸಲು ಯಾವುದೇ ನೆಲೆ ಇಲ್ಲದೆ ಇರುವುದರಿಂದ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಘೋಷಿಸಿತು.