×
Ad

ಹೆಚ್ಚಿನ ಮಾಲಿನ್ಯ ನಿಗಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ: ಸುಪ್ರೀಂ ಕೋರ್ಟ್‌ಗೆ ವಕೀಲರಿಂದ ಮಾಹಿತಿ

ದಿಲ್ಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಕಳಪೆ

Update: 2025-11-03 21:09 IST

ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ, ನ. 3: ದಿಲ್ಲಿಯಲ್ಲಿ ವಾಯು ಗುಣಮಟ್ಟ ಕುಸಿಯುತ್ತಿರುವಂತೆಯೇ, ರಾಷ್ಟ್ರ ರಾಜಧಾನಿಯಲ್ಲಿರುವ ಹೆಚ್ಚಿನ ನಿಗಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ಸೋಮವಾರ ವಕೀಲರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟವು ಸೋಮವಾರ ‘‘ಅತ್ಯಂತ ಕಳಪೆ’’ಯಾಗಿದ್ದು, ಮಧ್ಯಾಹ್ನ 1:05ರ ವೇಳೆಗೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 304 ಆಗಿತ್ತು.

ದೀಪಾವಳಿಯ ದಿನದಂದು, 37 ನಿಗಾ ಕೇಂದ್ರಗಳ ಪೈಕಿ ಕೇವಲ ಒಂಭತ್ತು ಕಾರ್ಯನಿರ್ವಹಿಸುತ್ತಿದ್ದವು ಎಂದು ಒಬ್ಬ ವಕೀಲ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದರು. ‘‘ಜಿಆರ್‌ಎಪಿಯನ್ನು ಯಾವಾಗ ಅನುಷ್ಠಾನಕ್ಕೆ ತರುತ್ತಾರೆ ಎನ್ನುವುದು ಕೂಡಾ ನಮಗೆ ತಿಳಿದಿಲ್ಲ. ಪರಿಸ್ಥಿತಿ ಗಂಭೀರವಾಗಿದೆ’’ ಎಂದು ವಕೀಲರು ಹೇಳಿದರು. ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.

ವಾಯು ಮಾಲಿನ್ಯ ನಿಗಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳ ಸರಮಾಲೆಯೇ ಬಂದಿತ್ತು ಎಂಬುದಾಗಿ ಇನ್ನೋರ್ವ ವಕೀಲ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ, ವಾಯು ಗುಣಮಟ್ಟವು ಇನ್ನಷ್ಟು ಹದಗೆಡುವುದನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಮ್)ಕ್ಕೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ವಾಯು ಗುಣಮಟ್ಟವು ‘ಅತ್ಯಮತ ಕಳಪೆ’ಯಾಗಿದ್ದು, ಬೂದು ಬಣ್ಣದ ಹೊಗೆಯು ರಾಷ್ಟ್ರ ರಾಜಧಾನಿಯನ್ನು ಆವರಿಸಿಕೊಂಡಿದೆ.

► ಇಂಡಿಯಾ ಗೇಟ್ ಮಾಯ: ಆಪ್, ಕಾಂಗ್ರೆಸ್

ಹೊಗೆಯಿಂದ ಆವೃತವಾಗಿರುವ ದಿಲ್ಲಿಯಲ್ಲಿ ವಾಯು ಗುಣಮಟ್ಟವು ಕಳಪೆ ದರ್ಜೆಗೆ ಕುಸಿದಿರುವ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಕಾಂಗ್ರೆಸ್ ದಿಲ್ಲಿಯ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಹೊಗೆಯ ನಡುವೆ ಅಸ್ಪಷ್ಟವಾಗಿ ಗೋಚರಿಸುವ ಇಂಡಿಯಾ ಗೇಟ್‌ ನ ಚಿತ್ರವೊಂದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಾಕಿರುವ ಆಪ್, ಈ ಐತಿಹಾಸಿಕ ಸ್ಮಾರಕವೇ ನಾಪತ್ತೆಯಾಗಿದೆ ಎಂದು ಬಣ್ಣಿಸಿದೆ.

ಇದೇ ಅಭಿಪ್ರಾಯವನ್ನು ಕಾಂಗ್ರೆಸ್ ಕೂಡ ವ್ಯಕ್ತಪಡಿಸಿದೆ.

ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ ದಿಲ್ಲಿ ವಾಯುಮಾಲಿನ್ಯವು ‘‘ಚಿಂತೆಯ ವಿಷಯವಾಗಿದೆ’’ ಎಂದು ಬಣ್ಣಿಸಿದ್ದಾರೆ. ‘‘ಆದರೆ, ಇದಕ್ಕಿಂತಲು ಹೆಚ್ಚಿನ ಚಿಂತೆಯ ವಿಷಯವೆಂದರೆ, ಮಾಲಿನ್ಯದ ತೀವ್ರತೆಯನ್ನು ಸೂಚಿಸುವ ವಾಯು ಮಾಲಿನ್ಯ ಸೂಚ್ಯಂಕದ ಸಂಖ್ಯೆಗಳನ್ನೇ ಮರೆಮಾಚಲು ತಂತ್ರಗಾರಿಕೆಗಳನ್ನು ರೂಪಿಸಲಾಗುತ್ತಿದೆ’’ ಎಂದು ಠಾಕ್ರೆ ‘ಎಕ್ಸ್’ನಲ್ಲಿ ಬರೆದಿದ್ದಾರೆ.

► ವಾಯುಮಾಲಿನ್ಯ ಸೂಚ್ಯಂಕದಲ್ಲಿ ಹಸ್ತಕ್ಷೇಪ

ದಿಲ್ಲಿಯಲ್ಲಿರುವ ವಾಯು ಮಾಲಿನ್ಯ ಸೂಚ್ಯಂಕದ ದತ್ತಾಂಶಗಳನ್ನು ತಿರುಚಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ತನ್ನ ಆರೋಪವನ್ನು ಸಾಬೀತುಪಡಿಸಲು ಅವರು ವೀಡಿಯೊವೊಂದನ್ನು ಎಕ್ಸ್‌ನಲ್ಲಿ ಹಾಕಿದ್ದಾರೆ. ದಿಲ್ಲಿ ಮಹಾನಗರ ಪಾಲಿಕೆಯ ಟ್ರಕ್‌ ಗಳನ್ನು ಈ ವೀಡಿಯೊ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಟ್ರಕ್‌ ಗಳು ಮಾಲಿನ್ಯ ನಿಗಾ ಕೇಂದ್ರದ ಸುತ್ತ ರಾತ್ರಿ-ಹಗಲು ನೀರು ಚಿಮುಕಿಸುತ್ತಿವೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.

‘‘ಐಎಸ್‌ಬಿಟಿಯಲ್ಲಿರುವ ಮಾಲಿನ್ಯ ನಿಗಾ ಕೇಂದ್ರದ ಸುತ್ತ ರಾತ್ರಿ ಹಗಲು ನೀರು ಚಿಮುಕಿಸಲಾಗುತ್ತಿದೆ. ಈ ಮೂಲಕ ಈ ಕೇಂದ್ರವು ಕಡಿಮೆ ವಾಯು ಮಾಲಿನ್ಯ ಸೂಚ್ಯಂಕವನ್ನು ದಾಖಲಿಸುವಂತೆ ಮಾಡಿ ಅದನ್ನು ಹೊರ ಜಗತ್ತಿಗೆ ತೋರಿಸಬಹುದು ಎನ್ನುವ ದುರುದ್ದೇಶವನ್ನು ಸರಕಾರ ಹೊಂದಿದೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News