12 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವಕನ ಹೆತ್ತವರನ್ನು ಭೇಟಿಯಾಗಲು ಬಯಸಿದ ಸುಪ್ರೀಂ ಕೋರ್ಟ್!
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಡಿ. 18: ಹನ್ನೆರಡು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲೇ ಮಲಗಿರುವ 31 ವರ್ಷದ ವ್ಯಕ್ತಿಯೊಬ್ಬರ ಹೆತ್ತವರನ್ನು ಭೇಟಿ ಮಾಡುವ ಇಚ್ಛೆಯನ್ನು ಸುಪ್ರೀಂ ಕೋರ್ಟ್ ಗುರುವಾರ ವ್ಯಕ್ತಪಡಿಸಿದೆ. ಕೃತಕ ಜೀವರಕ್ಷಕ ಸಲಕರಣೆಗಳನ್ನು ತೆಗೆಯುವ ಮೂಲಕ ತನ್ನ ಮಗನಿಗೆ ದಯಾಮರಣ ನೀಡಬೇಕೆಂದು ಕೋರಿ ವ್ಯಕ್ತಿಯ ತಂದೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಈ ನಿರ್ಧಾರ ತೆಗೆದುಕೊಂಡಿದೆ.
2013ರಲ್ಲಿ, ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಬಿದ್ದಿದ್ದ ಹರೀಶ್ ರಾಣಾ ತಲೆಗೆ ಬಲವಾದ ಗಾಯಗಳಾಗಿದ್ದವು. ಅಂದಿನಿಂದ ಇಂದಿನವರೆಗೆ 12 ವರ್ಷಗಳಿಗೂ ಅಧಿಕ ಕಾಲ ಅವರನ್ನು ಕೃತಕ ಜೀವರಕ್ಷಕ ವ್ಯವಸ್ಥೆಯಲ್ಲಿಡಲಾಗಿದೆ.
ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಮ್‌ಎಸ್)ಯ ವೈದ್ಯರುಗಳ ಎರಡನೇ ವೈದ್ಯಕೀಯ ಮಂಡಳಿ ಸಲ್ಲಿಸಿದ ಹರೀಶ್ ರಾಣಾನ ವೈದ್ಯಕೀಯ ಇತಿಹಾಸವನ್ನು ಒಳಗೊಂಡ ವರದಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಪರಿಶೀಲಿಸಿತು ಹಾಗೂ ಇದೊಂದು ‘‘ದುಃಖದಾಯಕ ವರದಿ’’ ಎಂದು ಹೇಳಿತು.
‘‘ಇದು ಅತ್ಯಂತ ದುಃಖದಾಯಕ ವರದಿ. ನಾವು ಈ ಹುಡುಗನನ್ನು ಈ ಸ್ಥಿತಿಯಲ್ಲಿ ಇರಿಸುವಂತಿಲ್ಲ’’ ಎಂದು ಹೇಳಿದ ಪೀಠವು, ರಾಣಾನ ಹೆತ್ತವರೊಂದಿಗೆ ಜನವರಿ 13 ಮಧ್ಯಾಹ್ನ 3 ಗಂಟೆಗೆ ಭೇಟಿಯನ್ನು ನಿಗದಿಪಡಿಸಿತು.
ತನ್ನ ಮಗನ ಕೃತಜ ಜೀವರಕ್ಷಕ ವ್ಯವಸ್ಥೆಯನ್ನು ತೆಗೆಯಲು ನಿರ್ದೇಶನ ನೀಡಬೇಕೆಂದು ಕೋರಿ ಅಶೋಕ್ ರಾಣಾ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ರೋಗಿಯ ಸ್ಥಿತಿಯನ್ನು ಪರಿಶೀಲಿಸಿದ ಪ್ರಥಮ ವೈದ್ಯಕೀಯ ಮಂಡಳಿಯು, ರೋಗಿಯು ಚೇತರಿಸಿಕೊಳ್ಳುವ ಸಾಧ್ಯತೆ ಅತ್ಯಂತ ವಿರಳ ಎಂದು ಹೇಳಿತ್ತು.
ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಕೃತಕ ಜೀವರಕ್ಷಕ ವ್ಯವಸ್ಥೆಯನ್ನು ತೆಗೆಯುವ ನಿಟ್ಟಿನಲ್ಲಿ ಪರಿಣತ ಅಭಿಪ್ರಾಯಕ್ಕಾಗಿ ಪ್ರಾಥಮಿಕ ಮತ್ತು ಎರಡನೇ ವೈದ್ಯಕೀಯ ಮಂಡಳಿಗಳನ್ನು ರಚಿಸಬೇಕು ಎಂಬುದಾಗಿ 2023ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳು ಹೇಳುತ್ತವೆ.
‘‘ಅವರು ಉಸಿರಾಡುವ ಮತ್ತು ಆಹಾರ ಸೇವಿಸಲು ಬಳಸುವ ಎರಡು ಕೊಳವೆಗಳೊಂದಿಗೆ ಮಲಗಿದ್ದಾರೆ. ಮಲಗಿದಲ್ಲಿಯೇ ಇರುವುದರಿಂಂದ ಅವರು ದೊಡ್ಡ ಗಾಯಗಳಿಂದ ಬಳಲುತ್ತಿದ್ದಾರೆ ಎನ್ನುವುದನ್ನು ವರದಿಯೊಂದಿಗೆ ಲಗತ್ತಿಸಲಾಗಿರುವ ಚಿತ್ರಗಳು ತೋರಿಸುತ್ತವೆ. ಈ ಸ್ಥಿತಿಯಿಂದ ಅವರು ಚೇತರಿಸಿಕೊಳ್ಳುವ ಸಾಧ್ಯತೆ ನಗಣ್ಯ ಎಂಬ ಅಭಿಪ್ರಾಯವನ್ನು ವೈದರ ತಂಡ ವ್ಯಕ್ತಪಡಿಸಿದೆ. ಹರೀಶ್ ಈ ಸ್ಥಿತಿಯಲ್ಲಿ ಕಳೆದ 12 ವರ್ಷಗಳಿಂದ ಇದ್ದಾರೆ’’ ಎಂದು ನ್ಯಾಯಾಲಯ ಹೇಳಿತು.